ಮದ್ದೂರು: ತಾಲೂಕಿನ ಆತಗೂರು ಹೋಬಳಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಹೆಬ್ಬೆರಳು ಗ್ರಾಮದಲ್ಲಿ ನಡೆಯುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಏತ ನೀರಾವರಿ ಯೋಜನೆಯ ಮೂಲಕ 20 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ನವಿಲೆ ಗ್ರಾಮದಲ್ಲಿ ಮಳೆಯಿಂದ ಹಾನಿಗೊಳಗಾಗಿರುವ ಡ್ಯಾಮ್ ವೀಕ್ಷಣೆ, ಮುತ್ತುರಾಯನ ಕೆರೆ ಪೋಷಣೆ ನಾಲೆ ಕಾಮಗಾರಿ ವೀಕ್ಷಣೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಶುದ್ಧೀಕರಣ ಘಟಕದ ಅಭಿವೃದ್ಧಿ ಕಾಮಗಾರಿ ಯೋಜನೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಬುಧವಾರ ಪರಿಶೀಲನೆ ನಡೆಸಿ ಮಾತನಾಡಿದರು.
ಕೆಲವು ಕಾಮಗಾರಿಗಳು ಶೇ.90 ರಷ್ಟು, ಕೆಲವು 70 ರಷ್ಟು ಪೂರ್ಣಗೊಂಡಿವೆ, ಇನ್ನು ಕೆಲವು ಕಾಮಗಾರಿಗಳು ಪೂರ್ಣಗೊಳ್ಳಬೇಕಾಗಿದೆ. ಆದ್ದರಿಂದ ಅಧಿಕಾರಿಗಳ ಜತೆಯಲ್ಲಿ ಖುದ್ದು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದೇನೆ. ಶೀಘ್ರವಾಗಿ ಕಾಮಗಾರಿ ಪೂರ್ಣಗೊಳಿಸಿ ಜನರ ಹಾಗೂ ರೈತರ ಉಪಯೋಗಕ್ಕೆ ಬರುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಆತಗೂರು ಹೋಬಳಿಯಲ್ಲಿ ನಡೆದಿರುವ ಕಾಮಗಾರಿಗಳು ಕೆಲವೊಂದು ಕಡೆ ಕಳಪೆಯಿಂದ ಕೂಡಿರುವುದಾಗಿ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ನಾನು ಪರಿಶೀಲನೆ ಮಾಡಿದಾಗಲೂ ಕಾಮಗಾರಿ ಸಮಾಧಾನ ತಂದಿಲ್ಲ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಯಾವ ಕಾಮಗಾರಿಗಳಲ್ಲಿ ಲೋಪವಾಗಿದೆ ಎಂಬುದರ ಬಗ್ಗೆ ಪರಿಶೀಲಿಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಶೀಘ್ರವಾಗಿ ಸರ್ಕಾರದಿಂದ ವಿಶೇಷ ಅನುದಾನ ತಂದು ತಾಲೂಕಿನಲ್ಲಿ ಸಾಕಾಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಂಡು ಕ್ಷೇತ್ರದ ಜನರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಎಚ್.ಎಸ್.ನಾಗರಾಜು, ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜು, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಂತರ ಚಿಕ್ಕಣ್ಣ, ಅಧಿಕಾರಿಗಳಾದ ಕೋದಂಡರಾಮ, ಶಂಕರ್, ಮಹದೇವು, ಶರತ್, ನರಸಿಂಹ, ವೆಂಕಟೇಶ್, ಮುಖಂಡರಾದ ಪುಟ್ಟೇಗೌಡ, ಗಂಗಾಧರ್, ವಾಸು, ನಾಗೇಶ್ ಇದ್ದರು.