ಜಿಲ್ಲೆ

ಅಭಿವೃದ್ಧಿ ಕಾಣದ ದೊಡ್ಡರಸನಕೊಳ

ಚಾಮರಾಜನಗರ: ಜಿಲ್ಲಾ ಕೇಂದ್ರದ ಮುಕುಟ ಮಣಿಯಂತಿರುವ ಇತಿಹಾಸ ಪ್ರಸಿದ್ಧ ದೊಡ್ಡರಸನ ಕೊಳ ಇಂದಿಗೂ ಅಭಿವೃದ್ಧಿ ಕಾಣದೇ, ತನ್ನ ಸೊಬಗನ್ನು ಕಳೆದುಕೊಳ್ಳುತ್ತಿದೆ.

ನಗರದ ಹೊಸ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ಇರುವ ದೊಡ್ಡರಸನ ಕೊಳವನ್ನು ಕ್ರಿ.ಶ 1826 ರಲ್ಲಿ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನವನ್ನು ನಿರ್ಮಾಣ ಮಾಡಿದ ಸಂದರ್ಭದಲ್ಲೇ, ಈ ದೊಡ್ಡರಸನ ಕೊಳವನ್ನು ನಿರ್ಮಾಣ ಮಾಡಲಾಗಿದೆ. ಈ ಕಾರಣಕ್ಕೆ ದೊಡ್ಡರಸನ ಕೊಳ ತನ್ನದೇಯಾದ ಐತಿಹಾಸಿಕ ಮಹತ್ವವನ್ನು ಒಳಗೊಂಡಿದೆ. ಈ ದೊಡ್ಡರಸನ ಕೊಳಕ್ಕೆ ಹೊಂದಿಕೊಂಡಂತೆ, ನಗರದ ಪ್ರಸಿದ್ಧ ಕೊಳದ ಗಣಪತಿ ದೇವಸ್ಥಾನ ಮತ್ತು ಅಯ್ಯಪ್ಪಸ್ವಾಮಿ ದೇವಸ್ಥಾನ ಹಾಗೂ ಸುಬ್ರಹ್ಮಣ್ಯ ದೇವಸ್ಥಾನವಿದೆ. ಈ ದೇವಸ್ಥಾನಗಳಿಗೆ ವಿಶೇಷ ದಿನಗಳಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ಪೂಜೆ ಸಲ್ಲಿಸುತ್ತಾರೆ.

ಆದರೇ ದೊಡ್ಡರಸನಕೊಳವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಯಾರು ಮನಸ್ಸು ಮಾಡದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಕೊಳದ ಸುತ್ತಲೂ ಗಿಡಗೆಂಟಿಗಳು ಬೆಳೆದುಕೊಂಡು ಯಾರು ಸಮೀಪ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಳದ ಮಧ್ಯೆದಲ್ಲಿ ನೀರು ನಿಲ್ಲುವ ಸ್ಥಳ, ಮೆಟ್ಟಿಲುಗಳು, ಆಸನಗಳು ಹದಗೆಟ್ಟಿದೆ. ಕೊಳದ ಸುತ್ತು ಗೋಡೆ ಭಾಗಶಃ ಕುಸಿದಿದ್ದು, ಮಳೆಗಾಲದಲ್ಲಿ ಹೆಚ್ಚಿನ ನೀರು ತುಂಬಿದರೇ ಮತ್ತಷ್ಟು ಕುಸಿಯುವ ಸಾಧ್ಯತೆಗಳಿದೆ. ಮೊಳದ ಮಧ್ಯೆದಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಸ್ಮಶಾನದಂತೆ ಗೋಚರವಾಗುತ್ತದೆ. ಈ ನಿಟ್ಟಿನಲ್ಲಿ ಐತಿಹಾಸಿಕ ದೊಡ್ಡರಸನ ಕೊಳವನ್ನು ಅಭಿವೃದ್ಧಿಗೊಳಿಸುವ ದೃಷ್ಟಿಯಲ್ಲಿ ಜನಪ್ರತಿನಿಧಿಗಳು ಹಾಗೂ ನಗರಸಭೆ ಅಧಿಕಾರಿಗಳು ಮನಸ್ಸು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕುಸಿದಿರುವ ಸುತ್ತುಗೋಡೆ:

ದೊಡ್ಡರಸನ ಕೊಳದ ರಕ್ಷಣೆಗಾಗಿ ಸುತ್ತಲೂ ಎತ್ತರವಾದ ಸುತ್ತು ಗೋಡೆ ನಿರ್ಮಾಣ ಮಾಡಲಾಗಿದ್ದು, ಅನೇಕ ಕಡೆಗಳಲ್ಲಿ ಕುಸಿದು ಬಿದ್ದಿದೆ. ಹಿಂದಿನ ವರ್ಷ ಸುರಿದ ಭಾರಿ ಮಳೆಯಿಂದಾಗಿ ಕೊಳ ಭರ್ತಿಯಾಗಿತ್ತು. ಈ ಸಂದರ್ಭದಲ್ಲಿ ಖಾಸಗಿ ಬಸ್ ನಿಲ್ದಾಣದ ರಸ್ತೆಗೆ ಹೊಂದಿಕೊಂಡ ಸುತ್ತು ಗೋಡೆ ಕುಸಿದುಬಿದ್ದಿತ್ತು. ಮತ್ತೊಂದು ಭಾಗದಲ್ಲಿ ಹಲವಾರು ವರ್ಷಗಳ ಹಿಂದೆಯೇ ಗೋಡೆ ಕುಸಿದು ಬಿದ್ದಿದೆ. ಆದರೆ ಗೋಡೆ ಕುಸಿದು ಬಿದ್ದಾಗಲೆಲ್ಲ ನಗರಸಭೆ ವತಿಯಿಂದ ತೇಪೆ ಹಾಕುವ ಕೆಲಸವನ್ನು ಮಾಡಲಾಗುತ್ತಿದೆ. ಆದರೇ ಇದನ್ನು ಸಮರ್ಪಕವಾಗಿ ಅಭಿವೃದ್ಧಿಗೊಳಿಸುವ ಮನಸ್ಸನ್ನು ಯಾರು ಮಾಡುತ್ತಿಲ್ಲ. ಕೊಳದ ಒಂದು ಭಾಗದಲ್ಲಿರುವ ಮೆಟ್ಟಿಲುಗಳು ಹಾಳಾಗಿದ್ದು, ಯಾವುದನ್ನು ಸರಿಪಡಿಸುವ ಕಾರ್ಯವನ್ನು ಮಾಡಿಲ್ಲ. ಕೊಳದ ಮಧ್ಯೆ ಭಾಗದಲ್ಲಿ ನೀರು ತುಂಬುವ ಸ್ಥಳವೂ ಕೂಡ ಸಂಪೂರ್ಣ ಹಾಳಾಗಿದೆ. ಸುತ್ತಲೂ ಅಳವಡಿಸಿರುವ ವಿದ್ಯುತ್ ಕಂಬಗಳು ಹಾಗೂ ಸಿಮೆಂಟ್ ಹಾಸುಗಳು ಮುರಿದು ಬಿದ್ದಿದೆ. ಆಗಾಗಿ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ದೊಡ್ಡರಸನ ಕೊಳವನ್ನು ಅಭಿವೃದ್ಧಿಪಡಿಸಿದ್ದೇ ಆದರೇ, ಆಕರ್ಷಕವಾದ ಉದ್ಯಾನವನ ಆಗಲಿದೆ. ಆದರೇ ಈ ವರೆಗೂ ಯಾವ ಜನಪ್ರತಿನಿಧಿಯಾಗಲಿ, ಅಧಿಕಾರಿಯಾಗಲಿ ಇತ್ತ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಬೇಸರ ಹೊರ ಹಾಕಿದ್ದಾರೆ.

ಗಣಪತಿ ವಿಸರ್ಜನೆಗೆ ಮಾತ್ರ ನೆನಪು:

ನಗರದ ಶ್ರೀವಿದ್ಯಾ ಗಣಪತಿ ಮಂಡಳಿಯಿಂದ ಪ್ರತಿವರ್ಷವೂ ಪ್ರತಿಷ್ಠಾಪಿಸುವ ದೊಡ್ಡ ಗಣಪತಿಯನ್ನು ಇದೇ ದೊಡ್ಡರಸನ ಕೊಳದಲ್ಲಿ ವಿಸರ್ಜನೆ ಮಾಡುವುದರಿಂದ ಆಗ ಮಾತ್ರ ಈ ಕೊಳ ಎಲ್ಲರಿಗೂ ನೆನಪಾಗುತ್ತದೆ. ಆ ಸಂದರ್ಭದಲ್ಲಿ ಮಾತ್ರ ದೊಡ್ಡರಸನಕೊಳಕ್ಕೆ ನಗರಸಭೆ ವತಿಯಿಂದ ನೀರು ತುಂಬಿಸಲಾಗುತ್ತದೆ. ಇಲ್ಲವಾದರೇ ಬರೀ ಬದಿಯ ನೀರು ಕಾಣಸಿಗುತ್ತದೆ. ಮಳೆ ನೀರನ್ನೇ ಆಶ್ರಯಿಸಿರುವ ದೊಡ್ಡರಸನಕೊಳವನ್ನು ಅಭಿವೃದ್ಧಿಗೊಳಿಸಿದ್ದೆ ಆದರೇ, ಹೆಚ್ಚಿನ ನೀರು ಸಂಗ್ರಹವಾಗುವುದಕ್ಕೂ ಅನುಕೂಲವಾಗುತ್ತದೆ. ಆದರೇ ಜನನಿಬಿಡ ಪ್ರದೇಶದಲ್ಲಿ ಕೊಳವಿದ್ದರೂ, ಇದರ ಅಭಿವೃದ್ಧಿ ಯಾರು ಕೂಡ ಮುತುವರ್ಜಿ ವಹಿಸಿಲ್ಲ. ಬಹುಮುಖ್ಯವಾಗಿ ಈ ಕೊಳದ ಸಮೀಪದಲ್ಲಿರುವ ಕೊಳದ ಗಣಪತಿಗೂ ಹಲವಾರು ವಿಶೇಷತೆಗಳಿದ್ದೂ, ಕೊಳವನ್ನು ಒಂದು ಉತ್ತಮ ಉದ್ಯಾನವನ್ನಾಗಿ ಅಭಿವೃದ್ಧಿಪಡಿಸಿದ್ದೇ ಆದರೆ, ಪ್ರೇಕ್ಷಣೀಯ ಸ್ಥಳವಾಗುತ್ತದೆ. ಸಮೀಪದ ದೇವಾಲಯಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

ಐತಿಹಾಸಿಕ ಅರಸರ ಕೊಳ:

ಮುಮ್ಮಡಿ ಕೃಷ್ಣರಾಜ ಒಡೆಯರ್ ತಂದೆ 9ನೇ ಚಾಮರಾಜ ಒಡೆಯರ್ 1774 ರಲ್ಲಿ ಇಲ್ಲಿನ ಜನನ ಮಂಟಪದಲ್ಲಿ ಜನಿಸಿದ್ದರು. ತಮ್ಮ ಮಾತೃಪಿತೃಗಳ ಸ್ಮರಣಾರ್ಥ 1826 ರಲ್ಲಿ ಶ್ರೀಚಾಮರಾಜೇಶ್ವರಸ್ವಾಮಿ ದೇವಾಲಯವನ್ನು ನಿರ್ಮಾಣ ಮಾಡಿದ್ದರು. ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನಕ್ಕೆ ನೈಋತ್ಯ ಭಾಗದಲ್ಲಿ ದೊಡ್ಡ ಅರಸನ ಕೊಳವನ್ನು ನಿರ್ಮಾಣ ಮಾಡಿದ್ದರು. ಇದನ್ನು ಆ ಕಾಲದಲ್ಲಿ ದೊಡ್ಡ ಅರಸರ ಸರೋವರ ಎಂದು ಕೂಡ ಕರೆಯಲಾಗುತ್ತಿತ್ತು. ಈ ಕೊಳದಿಂದಲೇ ರಥತ್ಸವದ ಸಂದರ್ಭದಲ್ಲಿ ಶ್ರೀಚಾಮರಾಜೇಶ್ವರನಿಗೆ ತೀರ್ಥಸ್ನಾನವು ನಡೆದು, ಅದೇ ದಿನ ಸಾಯಂಕಾಲ ಅತಿವೈಭವದಿಂದ ತೆಪ್ಪೋತ್ಸವವೂ ನಡೆಯುತ್ತಿತ್ತು ಎಂದು ಹೇಳಲಾಗುತ್ತದೆ. ಪ್ರತಿನಿತ್ಯವೂ ಚಾಮರಾಜೇಶ್ವರನ ಅಭಿಷೇಕಕ್ಕೆ ಇಲ್ಲಿಂದಲೇ ನೀರು ತರಲಾಗುತ್ತಿತ್ತು. ಕಾಲ ಉರುಳಿದಂತೆ ದೊಡ್ಡರಸನಕೊಳ ಅಭಿವೃದ್ಧಿ ಕಾಣದೇ, ಈ ಉತ್ಸವಾದಿಗಳು ಕಣ್ಮರೆಯಾಗುತ್ತಿದೆ ಎಂದು ಹಿರಿಯರು ಹೇಳುತ್ತಾರೆ.

ಶ್ರೀಚಾಮರಾಜೇಶ್ವರನಿಗೂ ದೊಡ್ಡ ಅರಸನ ಕೊಳಕ್ಕೂ ಅವಿನಾಭಾವ ಸಂಬಂಧವಿದೆ. ಆದರೇ ದೊಡ್ಡರಸನ ಕೊಳ ನನೆಗುದಿಗೆ ಬಿದ್ದದು, ಅಭಿವೃದ್ಧಿ ಕಾಣದೇ ಅನೇಕ ಆಚರಣೆಗಳು ನಿಂತುಹೋಗಿದೆ. ಈ ನಿಟ್ಟಿನಲ್ಲಿ ದೊಡ್ಡರಸನಕೊಳವನ್ನು ಅಭಿವೃದ್ಧಿಪಡಿಸಿದ್ದೇ ಆದಲ್ಲಿ ಶ್ರೀಚಾಮರಾಜೇಶ್ವರನಿಗೆ ಮತ್ತಷ್ಟು ಕಳೆ ಬರಲಿದೆ.

-ದರ್ಶನ್, ಪ್ರಧಾನ ಆಗಮಿಕರು, ಶ್ರೀಚಾಮರಾಜೇಶ್ವರಸ್ವಾಮಿ ದೇವಸ್ಥಾನ, ಚಾಮರಾಜನಗರ

ಅಮೃತ್-2 ಯೋಜನೆಯಡಿ ದೊಡ್ಡರಸನಕೊಳ ಅಭಿವೃದ್ಧಿಗಾಗಿ 1.50 ಕೋಟಿ ರೂ, ಅನುದಾನವನ್ನು ಮೀಸಲಿಡಲಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ನಗರಸಭಾ ಅಧ್ಯಕ್ಷರ ಮಾರ್ಗದರ್ಶನದಂತೆ ಶೀಘ್ರದಲ್ಲೇ ದೊಡ್ಡರಸನಕೊಳವನ್ನು ಅಭಿವೃದ್ಧಿಗೊಳಿಸಲಾಗುವುದು.

-ಎಸ್.ವಿ.ರಾಮದಾಸ್, ಪೌರಾಯುಕ್ತ, ನಗರಸಭೆ, ಚಾಮರಾಜನಗರ