ಮೈಸೂರು: ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಸಂಬಂಧ ಪ್ರಯತ್ನಗಳು ನಡೆಯುತ್ತಿವೆ ಎಂದು ದಿ.ವಿಷ್ಣುವರ್ಧನ್ ಅವರ ಅಳಿಯ, ನಟ ಅನಿರುದ್ಧ್ ತಿಳಿಸಿದರು.
ಮೈಸೂರು ತಾಲೂಕಿನ ಉದ್ಬೂರು ಬಳಿ ಇರುವ ವಿಷ್ಣುವರ್ಧನ್ ಸ್ಮಾರಕದಲ್ಲಿ ಗುರುವಾರ ಆಯೋಜಿಸಿದ್ದ ವಿಷ್ಣುವರ್ಧನ್ ಅವರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಬೆಂಗಳೂರಿನಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಮಂಟಪವನ್ನು ಭಾರತಿ ಅವರೇ ನಿರ್ಮಾಣ ಮಾಡಿದ್ದರು. ಆದರೆ, ಇತ್ತೀಚೆಗೆ ಮಂಟಪ ತೆರವು ಮಾಡಲಾಗಿದೆ. ಬಾಲಣ್ಣ ಕುಟುಂಬಕ್ಕೂ ಮನವಿ ಮಾಡಿದ್ದೇವೆ.
ಸರ್ಕಾರ ಜಾಗವನ್ನು ವಶಪಡಿಸಿಕೊಂಡಿದೆ. ಹೀಗಾಗಿ ಸ್ಮಾರಕ ನಿರ್ಮಾಣಕ್ಕೆ 10 ಗುಂಟೆ ಜಾಗಕ್ಕೆ ಸಿಎಂ ಬಳಿ ಮನವಿ ಮಾಡಿದ್ದೇವೆ ಎಂದರು. ಮೈಸೂರಿನಲ್ಲಿ ಸರ್ಕಾರ 16 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಿದೆ. ಸರ್ಕಾರ ಬೆಂಗಳೂರಿನಲ್ಲಿ ಜಾಗ ಕೊಟ್ಟರೆ ನಾವೇ ಸ್ಮಾರಕ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ಕುಟುಂಬದ ಬಗ್ಗೆ ಯಾರಾದರೂ ಏನಾದರೂ ಇಲ್ಲದಿರುವುದನ್ನು ಹೇಳಿದರೆ ನಂಬಬೇಡಿ ಎಂದು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮನವಿ ಮಾಡಿದರು.
ಏನಾದರೂ ಮಾತನಾಡಿದರೆ ನಮ್ಮ ಮನಸ್ಸಿಗೆ ಕಷ್ಟ ಆಗುತ್ತದೆ. ನಮ್ಮ ಕುಟುಂಬದ ಮೇಲೆ ಯಾರು ಏನೇ ಮಾತನಾಡಿದರೂ ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾರೋ ಏನೋ ಹೇಳಿದರೆಂದು ತಪ್ಪಾಗಿ ತಿಳಿದುಕೊಳ್ಳಬೇಡಿ ಎಂದು ಕೋರಿಕೊಂಡರು.
ನಮ್ಮ ಮನೆಗೆ ಬಂದು ಏನೇ ಇದ್ದರೂ ಮಾತನಾಡಿ ಸರಿಪಡಿಸಿಕೊಳ್ಳಿ. ನಿಮ್ಮ ಸಂತೋಷದಿಂದ ನನಗೆ ಬಹಳಷ್ಟು ಖುಷಿಯಾಗಿದೆ. ವಿಷ್ಣುವರ್ಧನ್ ಇಲ್ಲೇ ನಮ್ಮೆಲ್ಲರ ಜತೆಯಲ್ಲೇ ಇದ್ದಾರೆ.
ಎಲ್ಲರೂ ಒಳ್ಳೆಯ ಕೆಲಸ ಮಾಡಿ. ನಮ್ಮ ಅಭಿಮಾನಿಗಳು ಬುದ್ಧಿವಂತರು ಹಾಗೂ ವಿದ್ಯಾವಂತರು. ನಿಮ್ಮ ಪ್ರೀತಿ ಹೀಗೆ ಇರಲಿ. ನಿಮ್ಮ ಸಂತೋಷವೇ ನಮ್ಮ ಸಂತೋಷ. ಯಾರ ಮೇಲೂ ದ್ವೇಷ ಸಾಧಿಸಲು ಹೋಗಬೇಡಿ ಎಂದು ಅಭಿಮಾನಿಗಳಿಗೆ ಕಿವಿಮಾತು ಹೇಳಿದರು.
ನಮ್ಮ ಯಜಮಾನರ ಮೊಮ್ಮಗ ಜೇಷ್ಠವರ್ಧನ್ ಬಂದಿದ್ದಾನೆ. ಅವನಿಗೆ ನಿಮ್ಮ ಪ್ರೀತಿ ಇರಲಿ ಎಂದು ಹೇಳಿದರು. ರಾಜ್ಯ ಸರ್ಕಾರವು ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಕೊಟ್ಟಿದೆ. ಇದಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು.