ಜಿಲ್ಲೆ

ಅಭಿಮಾನದ ಜನಪ್ರವಾಹ: ರಾಜಕೀಯ ಸಂದೇಶ ರವಾನಿಸಿದ ಸಿದ್ದರಾಮಯ್ಯ ಅಮೃತ ಮಹೋತ್ಸವ

| ಶ್ರೀಕಾಂತ್ ಶೇಷಾದ್ರಿ ದಾವಣಗೆರೆ

ರಾಜ್ಯ ರಾಜಕಾರಣದ ದಿಕ್ಕುದೆಸೆ ಬದಲಿಸುವ ನಿರೀಕ್ಷೆಯೊಂದಿಗೆ ಮಧ್ಯ ಕರ್ನಾಟಕದ ಕೇಂದ್ರ ಭಾಗ ದಾವಣಗೆರೆಯಲ್ಲಿ ಬುಧವಾರ ನಡೆದ ಸಿದ್ದರಾಮಯ್ಯ ಅಮೃತ ಮಹೋತ್ಸವವು ಅಭಿಮಾನದ ಭೋರ್ಗರೆತ, ವಿಜೃಂಭಣೆಗೆ ಸಾಕ್ಷಿಯಾಯಿತು. ಕಾಂಗ್ರೆಸ್ ಈ ಸಮಾವೇಶದ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ರಣೋತ್ಸಾಹ ಹೆಚ್ಚಿಸಿಕೊಂಡರೆ, ಬಿಜೆಪಿ ಹಾಗೂ ಜೆಡಿಎಸ್​ಗೆ ರಣವೀಳ್ಯ ನೀಡಿತು.

ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡು, ರಾಜ್ಯ ರಾಜಕೀಯದ ಇತಿಹಾಸದ ಪುಟಗಳಲ್ಲಿ ಹಲವು ಮೈಲಿಗಲ್ಲುಗಳನ್ನು ಸ್ಥಾಪಿಸಿದ ಸಿದ್ದರಾಮಯ್ಯ 75 ವಸಂತ ಪೂರೈಸಿದ ಸಂದರ್ಭದಲ್ಲಿ ಹಮ್ಮಿಕೊಂಡ ಅತಿ ದೊಡ್ಡ ರಾಜಕೀಯ ಸಮಾವೇಶ ಇದಾಗಿತ್ತು. ಪಕ್ಷ ಹಾಗೂ ಸಿದ್ದರಾಮಯ್ಯ ಬಳಗ ಅಂದುಕೊಂಡಂತೆಯೇ ನಾಡಿಗೆ ಮತ್ತು ಪ್ರತಿಪಕ್ಷಕ್ಕೆ ಬೇರೆ, ಬೇರೆ ಆಯಾಮಗಳಲ್ಲಿ ಸ್ಪಷ್ಟ ಸಂದೇಶ ಕಳಿಸುವಲ್ಲಿಯೂ ಸಫಲವಾಯಿತು. ನಾಡಿನ ಮೂಲೆಮೂಲೆ ಯಲ್ಲಿರುವ ತಮ್ಮ ಅಭಿಮಾನಿಗಳನ್ನು ಒಂದೆಡೆ ಕಲೆಹಾಕಿ, ಅಭಿಮಾನದ ಧೀಶಕ್ತಿ ಎಷ್ಟಿದೆ ಎಂದು ಪಕ್ಷದ ಹೈಕಮಾಂಡ್​ಗೆ ತೋರಿಸುವಲ್ಲಿ ಸಫಲರಾದ ಸಿದ್ದರಾಮಯ್ಯ, ಒಂದರ್ಥದಲ್ಲಿ ಈ ಕಾರ್ಯಕ್ರಮದ ಮುಖೇನ ಚುನಾವಣಾ ಸಮರಕ್ಕೆ ಅಶ್ವಮೇಧ ಕುದುರೆ ಬಿಟ್ಟಂತೆ ತೋರ್ಪಟ್ಟಿತು.

ಕಾರ್ಯಕ್ರಮದಲ್ಲಿ ಮುಖ್ಯ ಆಕರ್ಷಣೆಯಾಗಿದ್ದ ರಾಹುಲ್ ಗಾಂಧಿ, ಸಿದ್ದರಾಮಯ್ಯನವರು ವರ್ಷ ಕಳೆದಂತೆ ಯುವಕರಂತೆ ಕಾಣುತ್ತಾರೆ ಎಂದು ಹೇಳುತ್ತಲೇ ಕರ್ನಾಟಕದಲ್ಲಿ ಮುಂದೆ ನಡೆಯುವ ಚುನಾವಣೆ ಬಗ್ಗೆ ಪ್ರಸ್ತಾಪಿಸಿ, ಬಿಜೆಪಿ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್ ಸರ್ಕಾರ ಇದ್ದಾಗಿನ ಪರಿಸ್ಥಿತಿ ಮತ್ತು ಈಗಿನ ಸ್ಥಿತಿಯ ನಡುವಿನ ವ್ಯತ್ಯಾಸ ತಿಳಿಸುತ್ತ, ‘ಬಿಜೆಪಿ ಕರ್ನಾಟಕದಲ್ಲಿ ಧ್ರುವೀಕರಣ ರಾಜಕಾರಣ ಮಾಡಲು ಹೊರಟಿದೆ. ಕಾಂಗ್ರೆಸ್ ಬಡವರ ಪರ ಕೆಲಸ ಮಾಡುತ್ತದೆ, ದ್ವೇಷದ ರಾಜಕಾರಣಕ್ಕೆ ಅವಕಾಶ ಕೊಡಲ್ಲ’ ಎಂದರು.

‘ಬಿಜೆಪಿ ಮತ್ತು ಆರ್​ಎಸ್​ಎಸ್ ಅನ್ನು ಸೋಲಿಸಲು ನಮ್ಮ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು, ಆ ಸಾಮರ್ಥ್ಯವನ್ನು ಹೊಂದಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಕರ್ನಾಟಕದಲ್ಲಿ ಜನರ ನಡುವೆ ಸಾಮರಸ್ಯ ಇತ್ತು. ಭಯ ಇರಲಿಲ್ಲ’ ಎಂದು ರಾಹುಲ್ ಹೇಳಿದರು.

ಅಭಿಮಾನದಲ್ಲಿ ಮಿಂದೆದ್ದ ಸಿದ್ದರಾಮಯ್ಯ: ಹುಟ್ಟುಹಬ್ಬದ ಶುಭಹಾರೈಕೆ ಮಹಾಪೂರದಲ್ಲಿ ಮಿಂದೆದ್ದ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬಂದವರನ್ನು ನಿರಾಸೆಗೊಳಿಸಲಿಲ್ಲ. ಎಂದಿನಂತೆ ಮೋದಿಯವರ ಸ್ಲೋಗನ್​ಗಳನ್ನು ಮುಂದಿಟ್ಟುಕೊಂಡು ತಮ್ಮ ಟಿಪಿಕಲ್ ಶೈಲಿಯಲ್ಲಿ ಹರಿಹಾಯ್ದರು. ‘ನಾನು ಅನ್ನಭಾಗ್ಯ ಕೊಟ್ಟೆ, ಕ್ಷೀರಭಾಗ್ಯ ಕೊಟ್ಟೆ, ಶೂಭಾಗ್ಯ ಕೊಟ್ಟೆ, ನೀವೇನು ಕೊಟ್ಟಿರಿ ಹೇಳಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧವೂ ವಾಗ್ದಾಳಿ ನಡೆಸಿದರು. ಜತೆಗೆ ಕಳೆದ ಚುನಾವಣೆಯಲ್ಲಿ ಮತ ನೀಡದ ಬಗ್ಗೆಯೂ ಪರೋಕ್ಷವಾಗಿ ಪ್ರಸ್ತಾಪಿಸಿದರು.

ಇದಿಷ್ಟು ಭಾಷಣದ ಭಾಗವಾದರೆ ಪ್ರಮುಖವಾಗಿ ಕಂಡಿದ್ದು, ಅಪಾರ ಜನಸ್ತೋಮ. ಜನರು ಜಮಾಯಿಸಿದ ಲೆಕ್ಕದಲ್ಲಿ ಜನನಾಯಕರಾಗಿ ಸಿದ್ದರಾಮಯ್ಯ ಮತ್ತಷ್ಟು ಉತ್ತುಂಗಕ್ಕೇರಿದ್ದಕ್ಕೆ ದಾವಣಗೆರೆ ಸಮಾವೇಶ ಸಾಕ್ಷಿಯಾಯಿತು. ಮುಂದಿನ ಚುನಾವಣೆಗೆ ನಾವು ಬಿಜೆಪಿಗೆ ಸುಲಭದ ತುತ್ತಲ್ಲ ಎಂದು ಸ್ಪಷ್ಟ ಸಂದೇಶ ವೇದಿಕೆಯಿಂದ ರವಾನೆಯಾಯಿತು. ಹಾಗೆಯೇ ಪಕ್ಷಾಂತರ ಮಾಡಲು ಆಸಕ್ತರಾಗಿ ಸೂಕ್ತ ಸಮಯಕ್ಕಾಗಿ ಕಾಯುತ್ತಿರುವವರಿಗೆ ಇಲ್ಲಿಂದ ಜಾತಿ ಲೆಕ್ಕಾಚಾರದ ಬಲಾಬಲದ ಪರಿಚಯವೂ ಆಯಿತು.

ಬಿಜೆಪಿ ಮತ್ತು ಆರ್​ಎಸ್​ಎಸ್ ಅನ್ನು ಸೋಲಿಸಲು ನಮ್ಮ ಎಲ್ಲ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದು, ಆ ಸಾಮರ್ಥ್ಯವನ್ನು ಹೊಂದಿದ್ದೇವೆ | ರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಿಂದುಳಿದ ವರ್ಗದ ನಾಯಕ ಎಂದು ಬಿಂಬಿಸಬೇಡಿ. ಅವರು ಸರ್ವ ಜನಾಂಗ, ಸರ್ವ ಧರ್ಮಕ್ಕೂ ನಾಯಕ. ಅವರಿಗೆ ಆರೋಗ್ಯ, ಜನರ ಸೇವೆ ಮಾಡುವ ಶಕ್ತಿ ಸಿಗಲಿ. ಅವರ ಮುಂದಾಳತ್ವದಲ್ಲಿ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಿ ಪಕ್ಷವನ್ನು ಅಧಿಕಾರಕ್ಕೆ ತರೋಣ. | ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ
ಸಿದ್ದರಾಮಯ್ಯ ಹೇಳಿದ್ದು...
  • ನಿರಂತರ ಪ್ರೀತಿ ವಿಶ್ವಾಸದಿಂದ ದೀರ್ಘಾವಧಿ ಜನಸೇವೆಗೆ ಅವಕಾಶ ಸಿಕ್ಕಿದೆ. ಎಲ್ಲಿಯವರೆಗೆ ದೈಹಿಕ, ಮಾನಸಿಕವಾಗಿ ಸದೃಢವಾಗಿರುತ್ತೇನೋ ಅಲ್ಲಿಯವರೆಗೆ ಸಕ್ರಿಯ ರಾಜಕಾರಣದಲ್ಲಿದ್ದು ನಾಡಿನ ಸೇವೆ ಮಾಡುತ್ತೇನೆ.
  • ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್-ನನ್ನ ನಡುವೆ ಬಿರುಕಿದೆ ಎಂದು ಪ್ರತಿಪಕ್ಷ ಹಾಗೂ ಮಾಧ್ಯಮದವರು ತಪ್ಪು ಮಾಹಿತಿ ಕೊಡುತ್ತಿದ್ದಾರೆ. ನಾವು ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ.
  • ನಮ್ಮ ಮುಂದಿರುವ ಸವಾಲು ಭ್ರಷ್ಟ, ಕೋಮುವಾದಿ, ಜನಪೀಡಕ ಸರ್ಕಾರ ಕಿತ್ತೊಗೆದು ರಾಹುಲ್ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸನ್ನು ಅಧಿಕಾರಕ್ಕೆ ತರುವುದಾಗಿದೆ. ಇದಕ್ಕೆ ಎಲ್ಲರ ಆಶೀರ್ವಾದ ಇರಬೇಕು.

ಆಪ್ತರ ಆಸೆ, ಅಭಿಲಾಷೆ: ಸಿದ್ದರಾಮಯ್ಯ ಆಪ್ತರ ಭಾಷಣದ ಸಾಲುಗಳ ನಡುವೆ ಆಸೆ, ಅಭಿಲಾಷೆ ಹೊರಹೊಮ್ಮಿತು. ಈ ಸಮಾವೇಶದ ಉದ್ದೇಶ ಈಡೇರಿದೆ ಎಂದು ಮಾಜಿ ಸ್ಪೀಕರ್ ರಮೇಶ ಕುಮಾರ್ ಹೇಳಿ, ಸಿದ್ದರಾಮಯ್ಯ ನಾಯಕತ್ವದಲ್ಲಿ ಸರ್ಕಾರ ತರೋಣ ಎಂದು ಕರೆಕೊಟ್ಟರು. ರಾಜ್ಯದಲ್ಲಿ ಮತ್ತೆ ಸಿದ್ದರಾಮಯ್ಯ ಸರ್ಕಾರದ ರೀತಿಯ ಸರ್ಕಾರ ಬರಬೇಕು ಎಂದು ಜನ ಬಯಸುತ್ತಿದ್ದಾರೆ ಎಂದು ಎಂ.ಬಿ. ಪಾಟೀಲ್ ಹೇಳಿದರು.

ಸಿದ್ದರಾಮಯ್ಯರ ಸಾಂಸ್ಕೃತಿಕ ನಾಯಕತ್ವ ಇನ್ನಷ್ಟು ಬಲಗೊಳ್ಳಬೇಕೆಂದು ಮಹದೇವಪ್ಪ ಕರೆ ನೀಡಿದರು. ಸಿದ್ದರಾಮಯ್ಯ ರಾಜ್ಯದ ಏಕೈಕ ಜನನಾಯಕ ಎಂದು ಕೃಷ್ಣ ಭೈರೇಗೌಡ ಮತ್ತು ಎಂ.ಆರ್. ಸೀತಾರಾಂ ಕೊಂಡಾಡಿದರು. ವೀರಪ್ಪ ಮೊಯಿಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಈ ಸಮಾವೇಶ ಸಿದ್ದರಾಮಯ್ಯ ಅವರಿಗೆ ಸಾವಿರ ಆನೆಬಲ ತಂದುಕೊಟ್ಟಿದೆ ಎಂದರು.

ಸಿದ್ದುವನ್ನು ಆಲಂಗಿಸಿದ ಡಿಕೆ: ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರೇಷ್ಮೆ ಶಾಲು ಹೊದಿಸಿ, ಇಂದಿರಾ ಕುರಿತ ಪುಸ್ತಕ ನೀಡಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯನವರನ್ನು ಅಭಿನಂದಿಸಿದರು. ಒಂದು ಹೆಜ್ಜೆ ಮುಂದಿಟ್ಟು ಸಿದ್ದರಾಮಯ್ಯನವರ ಕೈ ಎತ್ತಿ ಹಿಡಿದು ಜನರತ್ತ ತೋರಿದರು. ಈ ವೇಳೆ ರಾಹುಲ್ ಗಾಂಧಿ ಸೂಚನೆಯಂತೆ ಡಿ.ಕೆ ಶಿವಕುಮಾರ್ ಸಿದ್ದರಾಮಯ್ಯರನ್ನು ಆಲಂಗಿಸಿದರು. ಹಾಗೆಯೇ ಡಿಕೆಶಿ ಸಿದ್ದರಾಮಯ್ಯನವರಿಗೆ ಜೈಕಾರ ಹಾಕಿಸಿದಾಗಲೂ ಜನರ ಘೊಷಣೆ ಕೆಲ ನಿಮಿಷಗಳವರೆಗೂ ಮುಂದುವರಿದಿತ್ತು. ಉಭಯ ನಾಯಕರು ಪರಸ್ಪರ ಆಲಂಗಿಸಿದ್ದು ಸಂತೋಷವಾಯಿತೆಂದು ಭಾಷಣದಲ್ಲಿ ರಾಹುಲ್ ಉಲ್ಲೇಖಿಸಿದ್ದು ವಿಶೇಷವಾಗಿತ್ತು.

ನಾಯಕತ್ವದ ಪ್ರಸ್ತಾಪ ಇಲ್ಲ: ಅಮೃತಮಹೋತ್ಸವದಲ್ಲಿ ಕೇಂದ್ರಬಿಂದುವಾಗಿದ್ದ ಸಿದ್ದರಾಮಯ್ಯ ಯುವಕನಂತೆ ವೇದಿಕೆಯಲ್ಲಿ ಅತ್ತಿಂದಿತ್ತ ಓಡಾಡಿ ಶುಭಾಶಯ ಸ್ವೀಕರಿಸಿ ಗಮನ ಸೆಳೆದರು. ಈ ಸಮಾವೇಶದಲ್ಲಿ ಮುಂದಿನ ನಾಯಕತ್ವ ವಿಚಾರ ಪ್ರಸ್ತಾಪ ಆಗಬಹುದೆಂಬ ದೊಡ್ಡ ನಿರೀಕ್ಷೆ ರಾಜಕೀಯ ಚಾವಡಿಯಲ್ಲಿತ್ತು. ಆದರೆ, ರಾಹುಲ್ ಗಾಂಧಿಯವರಿಂದಾಗಲೀ ಅಥವಾ ಇತರ ನಾಯಕರ ಮಾತಿನಲ್ಲಾಗಲಿ ಸ್ಪಷ್ಟ ದನಿ ಬರಲಿಲ್ಲ. ಬದಲಿಗೆ, ಒಗ್ಗಟ್ಟಿನ ಮಂತ್ರಪಠಣವಾಯಿತು.