ಜಿಲ್ಲೆ

ಅಭಿನಂದನೆ, ಪುಸ್ತಕ ಬಿಡುಗಡೆ ನಾಳೆ

ವಿಜಯವಾಣಿ ಸುದ್ದಿಜಾಲ ಧಾರವಾಡ
ಧಾರವಾಡ: ಪ್ರೊ. ಎಸ್.ಟಿ. ನಂದಿಬೇವೂರ 70ನೇ ಜನ್ಮದಿನ ನಿಮಿತ್ತ ಅಭಿನಂದನಾ ಸಮಿತಿ ವತಿಯಿಂದ ಅಭಿನಂದನೆ ಹಾಗೂ ಪುಸ್ತಕ ಬಿಡುಗಡೆ ಸಮಾರಂಭವನ್ನು ಜು. 16ರಂದು ಬೆಳಗ್ಗೆ 10.30ಕ್ಕೆ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಏರ್ಪಡಿಸಲಾಗಿದೆ ಎಂದು ಸಮಿತಿ ಖಜಾಂಚಿ ಆತ್ಮಾನಂದ ಬಾಗೋಜಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ತೋಂಟದಾರ್ಯ ಮಠದ ಶ್ರೀ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನಂದಿಬೇವೂರ ರಚಿಸಿದ ‘ಸೂಪರ್ 60 ಆನ್ ಆಟೋಬಯೋಗ್ರಫಿ ಆಫ್ ಎ ಸೈಂಟಿಸ್ಟ್’ ಪುಸ್ತಕ ಬಿಡುಗಡೆ ಮಾಡುವರು. ಅತಿಥಿಗಳಾಗಿ ದಾವಣಗೆರೆ ವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರ, ಜನಪದ ವಿವಿ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ, ರಾಯಚೂರು ವಿವಿ ಕುಲಪತಿ ಪ್ರೊ.ಹರೀಶ ರಾಮಸ್ವಾಮಿ, ಹಾಸನ ವಿವಿ ಕುಲಪತಿ ಪ್ರೊ. ಟಿ.ಸಿ. ತಾರಾನಾಥ, ಕವಿವಿ ಕುಲಸಚಿವ ಯಶಪಾಲ ಕ್ಷೀರಸಾಗ ಆಗಮಿಸಲಿದ್ದಾರೆ. ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
450ಕ್ಕೂ ಹೆಚ್ಚು ಸಂಶೋಧನೆಗಳನ್ನು ಪ್ರಕಟಿಸಿರುವ ನಂದಿಬೇವೂರ 60 ವಿದ್ಯಾರ್ಥಿಗಳಿಗೆ ಪಿಎಚ್.ಡಿ, ಎಂ.ಫಿಲ್ ಪದವಿ ನೀಡಿದ್ದಾರೆ. ಅವರಿಗೆ ಅನೇಕ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಂದಿವೆ. ಈ ಹಿನ್ನೆಲೆ 70ನೇ ಜನ್ಮ ದಿನ ಆಚರಿಸುವ ಮೂಲಕ ಅವರನ್ನು ಆತ್ಮೀಯವಾಗಿ ಅಭಿನಂದಿಸಲು ಅವರ ಪಿಎಚ್.ಡಿ ಶಿಷ್ಯ ಬಳಗ ಸಿದ್ಧರೆ ಮಾಡಿದೆ ಎಂದರು.
ನಂದಿಬೇವೂರ ಕುಟುಂಬ ವಿಶ್ವವಿದ್ಯಾಯಲಯದ ಕಾರ್ಪಸ್ ನಿಧಿಯಾಗಿ 25 ಲಕ್ಷ ರೂ. ಠೇವಣಿ ಇರಿಸಲು ನಿರ್ಧರಿಸಿದೆ. ಇದರಿಂದ ಬರುವ ಹಣದಲ್ಲಿ ಕವಿವಿ ಎಂಎಸ್ಸಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ ನಡೆಸಲು ತೀರ್ಮಾನಿಸಿದ್ದಾರೆ ಎಂದರು.
ಪ್ರೊ. ಎಸ್.ಟಿ. ನಂದೀಬೇವೂರ, ಮಂಜುನಾಥ, ಇತರರು ಇದ್ದರು.