ಜಿಲ್ಲೆ

ಅಭಿನಂದನ ಕಾರ್ಯಕ್ರಮವಲ್ಲ ಸಂಕಲ್ಪ ಕಾರ್ಯಕ್ರಮ:ಕೆ.ಎಂ. ಶಿವಲಿಂಗೇಗೌಡ

Hassan - Ramesh H R

ಹಾಸನ: ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನನಗೆ ಅಭಿನಂದನೆ ಕಾರ್ಯಕ್ರಮ ಮಾಡಿದ್ದಾರೆ.ಇದು ಅಭಿನಂದನಾ ಸಮಾರಂಭವಾಗದೆ ಲೋಕಸಭಾ ಚುನಾವಣೆ ದೃಷ್ಟಿಯಿಂದ ಸಂಕಲ್ಪ ಕಾರ್ಯಕ್ರಮವಾಗಬೇಕು ಎಂದು ಶಾಸಕ ಹಾಗೂ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡುವ ಮೂಲಕ ಈ ಬಾರಿ ಹಾಸನದಲ್ಲಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವ ನಿರ್ಣಯ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.
ನಾನು ಕಳೆದ ಬಾರಿ ಪಕ್ಷ ಬದಲಾವಣೆ ಮಾಡುವ ಅನಿವಾರ್ಯತೆ ಇತ್ತು. ಅಂತಹ ಸಂಕಷ್ಟದ ಸಂದರ್ಭದಲ್ಲಿಯೂ ಕೂಡ ನನ್ನ ಕ್ಷೇತ್ರದ ಜನರು ನನ್ನ ಕೈ ಹಿಡಿದಿದ್ದಾರೆ ಅವರಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಲಾಗುವುದು ಎಂದರು.
ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಮಗೆ ಬರಬೇಕಾದಂತಹ ಅನುದಾನವನ್ನು ಸರಿಯಾಗಿ ನೀಡುತ್ತಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕೂಡ ಇದೆ ನೀತಿಯನ್ನ ಅನುಸರಿಸುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.
ನಾವು ಕೇಂದ್ರಕ್ಕೆ 4.30 ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ಆದರೆ, ನಮಗೆ ಕೇವಲ 53 ಕೋಟಿ ನೀಡುತ್ತಿದ್ದಾರೆ. ಈ ತಾರತಮ್ಯದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಲಾಯಿತು ಎಂದರು.
ಬಿಜೆಪಿಯವರು ರಾಜ್ಯದಲ್ಲಿ ಎಂದು ಸಹ ಜನರ ವಿಶ್ವಾಸ ಗಳಿಸಿ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಹಿಂಬದಿಯ ರಾಜಕಾರಣವನ್ನು ಮಾಡಿಕೊಂಡು ಬಂದಿದ್ದಾರೆ. ಈಗ ನರೇಂದ್ರ ಮೋದಿ ಅವರು ಶ್ರೀರಾಮನ ಹೆಸರಿನಲ್ಲಿ ಚುನಾವಣೆ ಮಾಡಲು ಹೊರಟಿದ್ದಾರೆ. ನಾವು ಕೂಡ ರಾಮನ ಭಕ್ತರು. ಆದರೆ ದೇವರ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು