ಜಿಲ್ಲೆ

ಅಭಾವ, ಆಶಾಭಾವದಲ್ಲಿ ‘ವರುಣ’

ಚಾಮರಾಜನಗರ: ಬರಪೀಡಿತ ಜಿಲ್ಲೆ ಎಂದೇ ಕರೆಸಿಕೊಳ್ಳುವ ಚಾಮರಾಜನಗರದಲ್ಲಿ ಮಳೆ ಅಭಾವ, ಆಶಾಭಾವದಲ್ಲಿ ಸಿಲುಕಿ ರೈತ ಸಂದಿಗ್ಧತೆ ಎದುರಿಸುವಂತಾಗಿದೆ.

ಮಳೆಯಾಶ್ರಿತ ಪ್ರದೇಶವಾಗಿರುವ ಚಾಮರಾಜನಗರ ಜಿಲ್ಲೆಯಲ್ಲಿ ಜೂನ್‌ನಿಂದ ಉತ್ತಮ ಮಳೆಯಾಗದೆ ಅಭಾವ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ವಾತಾವರಣ ಇರುವುದರಿಂದ ಆಶಾಭಾವ ಮೂಡಿದರೂ ಕಡಿಮೆ ಮಳೆಯಾದರೆ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಜಿಲ್ಲಾ ಕೃಷಿ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜೂನ್‌ನಿಂದ ಸೆ.17ರವರೆಗೆ ಒಟ್ಟು 206.3 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ 159.7 ಮಿ.ಮೀ ಮಳೆಯಾಗಿದೆ. ಶೇ.22.6 ಮಿ.ಮೀ ಮಳೆ ಕೊರತೆಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ ಮಳೆ ಅಭಾವ ಮುಂದಿನ ದಿನಗಳಲ್ಲಿ ಆಶಾಭಾವವನ್ನುಂಟು ಮಾಡುವುದೇ ಕಾದು ನೋಡಬೇಕಿದೆ.

ಮೂರು ತಾಲೂಕುಗಳಲ್ಲಿ ಕ್ಷೀಣ:

ಜಿಲ್ಲೆಯಲ್ಲಿ ಮೂರು ತಾಲೂಕುಗಳಲ್ಲಿ ಮಳೆ ಕೊರತೆಯಾಗಿದೆ. ಜೂನ್‌ನಿಂದ ಸೆ.18ರವರೆಗೆ ಚಾಮರಾಜನಗರ ತಾಲೂಕಿನಲ್ಲಿ ಶೇ.11.5, ಕೊಳ್ಳೇಗಾಲದಲ್ಲಿ ಶೇ.31, ಹನೂರಿನಲ್ಲಿ ಶೇ.36.8, ಯಳಂದೂರಿನಲ್ಲಿ ಶೇ.33.3ರಷ್ಟು ಮಳೆ ಕೊರತೆಯಾಗಿದೆ. ಹನೂರು ತಾಲೂಕು ಅಧಿಕ ಪ್ರಮಾಣದ ಮಳೆ ಅಭಾವವನ್ನು ಎದುರಿಸಿದರೆ, ಗುಂಡ್ಲುಪೇಟೆ ತಾಲೂಕಿನಲ್ಲಿ ಶೇ.44ರಷ್ಟು ಹೆಚ್ಚುವರಿಯಾಗಿ ಉತ್ತಮ ಮಳೆಯಾಗಿದೆ ಎಂದು ಅಂಕಿ-ಅಂಶ ಹೇಳುತ್ತಿವೆ.

17 ಕೆರೆಗಳಲ್ಲಿ ನೀರಿಲ್ಲ:

ಜಿಲ್ಲೆಯಲ್ಲಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ವ್ಯಾಪ್ತಿಗೆ 65 ಕೆರೆಗಳು ಬರುತ್ತವೆ. ಚಾಮರಾಜನಗರ-20, ಗುಂಡ್ಲುಪೇಟೆ-24, ಯಳಂದೂರು-6, ಕೊಳ್ಳೇಗಾಲ-4, ಹನೂರು-10 ಕೆರೆಗಳಿವೆ. ಇವುಗಳಲ್ಲಿ 7 ಕೆರೆಗಳು ಮಾತ್ರ ಪೂರ್ಣ ತುಂಬಿವೆ. 15 ಕೆರೆಗಳು ಶೇ.50ರಿಂದ ಶೇ.99ರಷ್ಟು ತುಂಬಿವೆ. 12 ಕೆರೆಗಳು ಶೇ.31ರಿಂದ 50ರಷ್ಟು ತುಂಬಿವೆ. 14 ಕೆರೆಗಳು ಶೇ.30ರಷ್ಟು ತುಂಬಿದ್ದರೆ, 17 ಕೆರೆಗಳು ನೀರಿಲ್ಲದ ಖಾಲಿ ಬಿದ್ದಿವೆ. ಇನ್ನು ಸೆ.17ರ ಮಾಹಿತಿ ಪ್ರಕಾರ, ಹನೂರಿನ ಉಡುತೊರೆ ಹಳ್ಳ ಜಲಾಶಯದಲ್ಲಿ 2279.93 ಅಡಿ (2309.71 ಗರಿಷ್ಠ ಮಟ್ಟ), ಕೊಳ್ಳೇಗಾಲ ತಾಲೂಕಿನ ಗುಂಡಾಲ್ ಜಲಾಶಯದಲ್ಲಿ 2262.09 ಅಡಿ(2267 ಗರಿಷ್ಠ ಮಟ್ಟ), ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯದಲ್ಲಿ 2446.20(2455 ಗರಿಷ್ಠ ಮಟ್ಟ), ಚಿಕ್ಕಹೊಳೆ ಜಲಾಶಯದಲ್ಲಿ 2461.60 ಅಡಿ(2474 ಗರಿಷ್ಠ ಮಟ್ಟ) ನೀರಿದೆ.

ಮಳೆ ಇಲ್ಲದೆ ಒಣಗಿದ ಬೆಳೆ:

ಜಿಲ್ಲೆಯಲ್ಲಿ ಮಳೆ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಳೆಗೆ ನೀರುಣಿಸಲಾಗದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಚಾಮರಾಜನಗರ, ಹನೂರು ತಾಲೂಕುಗಳಲ್ಲಿ ಮಳೆ ಇಲ್ಲದೆ ಬೆಳೆ ಒಣಗುತ್ತಿದೆ ಎಂದು ತಿಳಿದುಬಂದಿದೆ. ಅದರಲ್ಲೂ ಹನೂರು ತಾಲೂಕಿನಲ್ಲಿ ಕೃಷಿಕರಿಗೆ ಮಳೆ ಕೊರತೆ ತುಂಬಾ ಕಾಡುತ್ತಿದೆ. ಮೆಕ್ಕೆಜೋಳ ಮತ್ತು ಇತರ ಬೆಳೆಗಳು ಒಣಗಿ ನಿಂತಿವೆ. ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಹನೂರು ತಾಲೂಕು ಮಳೆಯಾಶ್ರಿತ ಪ್ರದೇಶವಾಗಿದೆ. ಹಲವು ಜಮೀನುಗಳಲ್ಲಿ ಬೋರ್‌ವೆಲ್ ಕೊರೆಸಿದರೂ ನೀರು ಬಾರದೆ ವಿಲವಾಗಿವೆ. ಹೀಗಾಗಿ ಮಳೆಯನ್ನೇ ನಂಬಿ ಕೃಷಿ ಮಾಡುತ್ತಿರುವ ರೈತರಿಗೆ ಬೆಳೆ ರಕ್ಷಣೆ ದೊಡ್ಡ ಸಮಸ್ಯೆಯಾಗಿದೆ. ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧಿಸುತ್ತಿರುವ ಹನೂರು ತಾಲೂಕಿನ ಕುರಟ್ಟಿಹೊಸೂರು ಗ್ರಾಮದಲ್ಲಿ ಜನ-ಜಾನುವಾರುಗಳಿಗೆ ಕುಡಿಯಲು ಮಾತ್ರ ನೀರಿಲ್ಲ. ಬೆಳೆಗಳಿಗೆ ಹಾಯಿಸಲೂ ನೀರಿಲ್ಲ. ಜಮೀನುಗಳಲ್ಲಿ ತೋಡಿಸಿರುವ ಬೋರ್‌ವೆಲ್‌ಗಳಲ್ಲಿ ನೀರು ಇಂಗಿ ಹೋಗಿದೆ. ಬೆಳೆದ ಬೆಳೆಗೆ ನೀರು ಕೊಡಲಾಗದೆ ಒಣಗಿ ಹೋಗುತ್ತಿವೆ.

ಮುಂಗಾರು ಹಂಗಾಮಿನ ಬಿತ್ತನೆ ವಿವರ:

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಸರು, ಉದ್ದು, ಅಲಸಂದೆ, ಹೈಬ್ರಿಡ್ ಮುಸುಕಿನ ಜೋಳ, ಸೂರ್ಯಕಾಂತಿ, ನೆಲಗಡಲೆ, ಹತ್ತಿ, ಭತ್ತ ಮತ್ತು ರಾಗಿ ಬೆಳೆಗಳನ್ನು ಪ್ರಮುಖವಾಗಿ ಬೆಳೆಯಲಾಗುತ್ತದೆ. ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ 1,07,914 ಹೆಕ್ಟೇರ್ ವಿತ್ತನೆ ಗುರಿ ನಿಗದಿಪಡಿಸಲಾಗಿದ್ದು, ಪ್ರಮುಖವಾಗಿ ಮುಸುಕಿನಜೋಳದಲ್ಲಿ 25,000 ಹಕ್ಟೇರ್, ಜೋಳದಲ್ಲಿ 15,000 ಹೆಕ್ಟೇರ್, ರಾಗಿಯಲ್ಲಿ 8000 ಹೆಕ್ಟೇರ್, ಭತ್ತದಲ್ಲಿ 10,000 ಹೆಕ್ಟೇರ್, ಹತ್ತಿಯಲ್ಲಿ 8,700 ಹೆಕ್ಟೇರ್ ಗುರಿ ನಿಗದಿ ಪಡಿಲಾಗಿದೆ. ಪ್ರಸ್ತುತ 78,695 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಜೋಳ-13,166 ಹೆಕ್ಟೇರ್, ಸೂರ್ಯಕಾಂತಿ-11,336 ಹೆಕ್ಟೇರ್, ಮುಸುಕಿನಜೋಳ-20,135 ಹೆಕ್ಟೇರ್, ಉದ್ದು-1,478 ಹೆಕ್ಟೇರ್, ಅಲಸಂದೆ-2,118 ಹೆಕ್ಟೇರ್, ನೆಲಗಡಲೆ-2,472 ಹೆಕ್ಟೇರ್, ರಾಗಿ-4,633 ಹೆಕ್ಟೇರ್, ಭತ್ತ 2,150 ಹೆಕ್ಟೇರ್, ಕಬ್ಬು-6,457 ಹೆಕ್ಟೇರ್ ಮತ್ತು ಹತ್ತಿ 3,061 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುತ್ತದೆ. ಭತ್ತ, ರಾಗಿ ಮತ್ತು ಮುಸುಕಿಜೋಳ ಬೆಳಗಳ ಬಿತ್ತನೆ ಕಾರ್ಯ ನಡೆಯುತ್ತಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ರೇಷ್ಮೆ ಮತ್ತು ಪಶು ಸಂಗೋಪನಾ ಇಲಾಖೆ , ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯ ಸಭೆಗೆ ಮಾಹಿತಿ ನೀಡಿದ್ದಾರೆ.

24ವರೆಗೆ ಮಳೆ ಸಾಧ್ಯತೆ: ಒಟ್ಟಾರೆಯಾಗಿ ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾಗುವ ಪ್ರಮಾಣ ಕಡಿಮೆ ಇದೆ. ಆದರೆ ಸೆ.24ವರೆಗೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗ ತಿಳಿಸಿದೆ.

ಜಿಲ್ಲೆಯಲ್ಲಿ ಜೂನ್‌ನಿಂದ ಸೆ.17ರವರೆಗೆ ಶೇ.22ರಷ್ಟು ಮಳೆ ಕೊರತೆಯಾಗಿದೆ. ಚಾಮರಾಜನಗರ ತಾಲೂಕಿನ ಚಂದಕವಾಡಿ, ಹೆಗ್ಗೋಠಾರ ಮತ್ತು ಹನೂರು ತಾಲೂಕು ಸೇರಿದಂತೆ ಕೆಲವೆಡೆ ಬೆಳೆ ಒಣಗಿವೆ. ಜಿಲ್ಲೆಯಲ್ಲಿ ಬರ ಆವರಿಸುತ್ತಿರುವ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲು ಪ್ರಮುಖ ಅಂಶಗಳ ಅಗತ್ಯವಿದೆ. ವಿಪತ್ತು ನಿರ್ವಹಣಾ ಪ್ರಾಧಿಕಾದ ಮಳೆ ಪ್ರಮಾಣ ತೆಗೆದುಕೊಳ್ಳುತ್ತದೆ. ಬೆಳೆಗಳ ಸ್ಥಿತಿ-ಗತಿ ತಿಳಿಯುವುದು, ಮಣ್ಣಿನಲ್ಲಿರುವ ತೇವಾಂಶದ ಪ್ರಮಾಣ, ಕಂದಾಯ ಮತ್ತು ಕೃಷಿ ಇಲಾಖೆ, ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಬೆಳೆಗಳ ಪರಿಶೀಲನೆ ನಡೆಸುತ್ತದೆ. ಅಂತರ್ಜಲ ಮಟ್ಟ ಕುಸಿತದ ಪ್ರಮಾಣವನ್ನು ಪರಿಗಣಿಸಲಾಗುತ್ತದೆ. ಹಬೀದ್ ಜಂಟಿ ಕೃಷಿ ನಿರ್ದೇಶಕ, ಕೃಷಿ ಇಲಾಖೆ, ಚಾಮರಾಜನಗರ