ಶಿರಸಿ: ಶಿವಮೊಗ್ಗ ಜಿಲ್ಲೆ ಶರಾವತಿ ಅಭಯಾರಣ್ಯ ವ್ಯಾಪ್ತಿಗೆ ಶಿರಸಿಯ ಹೆಬ್ರೆ, ಹೊಸೂರು, ಬುಗಡಿ ಗ್ರಾಮಗಳ ಅರಣ್ಯ ಪ್ರದೇಶ ಕೈಬಿಡುವಂತೆ ಒತ್ತಾಯಿಸಿ ಗುರುವಾರ ತಾಲೂಕಿನ ರಾಗಿಹೊಸಳ್ಳಿಯಲ್ಲಿ ಮಾನವ ಸರಪಳಿ ನಿರ್ವಿುಸಿ ಸಂಚಾರ ತಡೆ ನಡೆಸಿ ಪ್ರತಿಭಟಿಸಲಾಯಿತು.
ರಾಜ್ಯ ಸರ್ಕಾರವು ಶಿವಮೊಗ್ಗ ಶರಾವತಿ ವನ್ಯಜೀವಿ ಅಭಯಾರಣ್ಯಕ್ಕೆ ಹೆಚ್ಚುವರಿ ಅರಣ್ಯ ಪ್ರದೇಶ ಸೇರಿಸಿ 2019ರ ಜುಲೈ 7ರಂದು ಅಧಿಸೂಚನೆ ಹೊರಡಿಸಿದೆ. ಯೋಜನೆಯಡಿ ಶಿರಸಿ ತಾಲೂಕಿನ ಗ್ರಾಮಗಳನ್ನೂ ಸೇರಿಸಿದ್ದು ಆತಂಕಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಅಧಿಸೂಚನೆ ಹೊರಡಿಸುವ ಪೂರ್ವದಲ್ಲಿ ಸ್ಥಳೀಯ ಜನರ ಅಭಿಪ್ರಾಯ ಸಂಗ್ರಹಿಸಿಲ್ಲ. ಅಭಯಾರಣ್ಯ ವಿಸ್ತರಣೆ ಕುರಿತು ಜನಜಾಗೃತಿ ಮೂಡಿಸಿಲ್ಲ. ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಅರಣ್ಯ ಭೂಮಿ ಹಕ್ಕಿಗಾಗಿ ಈಗಾಗಲೇ ಅರ್ಜಿಸಲ್ಲಿದ್ದು, ಅದು ವಿಚಾರಣೆ ಹಂತದಲ್ಲಿರುವ ವೇಳೆ ಅಧಿಸೂಚನೆ ಹೊರ ಬಂದ ಕಾರಣ ಹಕ್ಕು ಮೊಟಕಾಗಲಿದೆ. ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಕಂದಾಯ ಭೂಮಿ ಸಾಗುವಳಿದಾರರಿಗೆ ಈ ಯೋಜನೆಯಿಂದ ಮುಂಬರುವ ದಿನಗಳಲ್ಲಿ ಸ್ವತಂತ್ರ ಹಾಗೂ ಸ್ವಾವಲಂಬಿ ಜೀವನಕ್ಕೆ ಆತಂಕ ಉಂಟಾಗುತ್ತದೆ. ಸಂಪೂರ್ಣವಾಗಿ ಈ ಪ್ರದೇಶದ ಮಾನವನ ಸ್ವತಂತ್ರ ಜೀವನಕ್ಕೆ ದಿಗ್ಬಂಧನೆ ಹಾಗೂ ಮೂಲ ಹಕ್ಕು ಮತ್ತು ಸೌಲಭ್ಯದಿಂದ ವಂಚಿತವಾಗುವುದಲ್ಲದೇ ಮಾನವ ಹಕ್ಕು ಪಡೆಯಲು ಕೂಡ ಈ ಯೋಜನೆ ಮಾರಕವಾಗಲಿದೆ ಎಂದರು.
ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಆಗಮಿಸುವವರೆಗೂ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಪೊಲೀಸರ ಓಲೈಕೆ ಮೀರಿ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ತಹಸೀಲ್ದಾರ್ ಎಂ.ಆರ್.ಕುಲಕರ್ಣಿ ಆಗಮಿಸಿ ಪ್ರತಿಭಟನಾನಿರತರಿಂದ ಮನವಿ ಸ್ವೀಕರಿಸಿ, ಸರ್ಕಾರಕ್ಕೆ ತಲುಪಿಸುವುದಾಗಿ ಹೇಳಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ಈ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ ಮರಾಠಿ, ರಾಗಿಹೊಸಳ್ಳಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರವೀಣ ಗೌಡ, ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತಾಲೂಕು ಘಟಕದ ಅಧ್ಯಕ್ಷ ಬಾಬು ಮರಾಠಿ, ಪ್ರಮುಖರಾದ ಸಂತೋಷ ಗೌಡ ಹಾಗೂ ಸ್ಥಳೀಯ 500ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
ಶರಾವತಿ ಅಭಯಾರಣ್ಯಕ್ಕೆ ತಾಲೂಕಿನ ಬಂಡಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಗಿಹೊಸಳ್ಳಿಯ ಹೆಬ್ರೆ, ಹೊಸೂರು, ಬುಗುಡಿ ಗ್ರಾಮಗಳ ಪ್ರದೇಶವನ್ನು ಸೇರಿಸಲಾಗಿದೆ. ಇದರಿಂದ ಭವಿಷ್ಯದಲ್ಲಿ ಇಲ್ಲಿನ ನಿವಾಸಿಗಳಿಗೆ ಅಭಯಾರಣ್ಯ ಯೋಜನೆ ನಿಯಮಾವಳಿಗಳಿಗೆ ಅನುಸಾರವಾಗಿಯೇ ನಡೆಯಬೇಕು. ಇಲ್ಲವಾದರೆ ಶಿಕ್ಷೆಯಾಗುತ್ತದೆ. ಮೂಲ ಹಕ್ಕಿನ ಮೇಲೆ ಗದಾ ಪ್ರಹಾರವಾಗುತ್ತಿದ್ದು, ತಕ್ಷಣ ಸರ್ಕಾರ ಈ ಗ್ರಾಮಗಳನ್ನು ಯೋಜನೆಯಿಂದ ಕೈಬಿಡಬೇಕು. | ದೇವರಾಜ ಮರಾಠಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಂಡಲ