ಜಿಲ್ಲೆ

ಅಬಕಾರಿ ಇಲಾಖೆಯಿಂದ ಕನ್ನಡ ರಾಜ್ಯೋತ್ಸವ

ಮೈಸೂರು: ನಮ್ಮ ಭಾಷೆಯ ಜತೆ ಜತೆಗೆ ಅನ್ಯಭಾಷೆ ಹಾಗೂ ಅನ್ಯ ಭಾಷಿಕರನ್ನೂ ಪ್ರೀತಿಸುತ್ತಾ ಪರಸ್ಪರ ಸೌಹಾರ್ದ ಹಾಗೂ ಸಾಮರಸ್ಯದಿಂದ ಬಾಳಬೇಕು ಎಂದು ಮೈಸೂರು ಗ್ರಾಮಾಂತರ ಜಿಲ್ಲಾ ಅಬಕಾರಿ ಉಪ ಆಯುಕ್ತ ಎ.ರವಿಶಂಕರ್ ಸಲಹೆ ನೀಡಿದರು.
ನಗರದ ಅಬಕಾರಿ ಉಪ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಕನ್ನಡ ನಾಡು, ನುಡಿ, ಜಲ ಹಾಗೂ ಗಡಿ ಸಂರಕ್ಷಣೆಗಾಗಿ ಕನ್ನಡಿಗರಾದ ನಾವೆಲ್ಲ ಪಣ ತೊಡಬೇಕು. ನಮ್ಮ ಭಾಷೆಯನ್ನು ಪ್ರೀತಿಸುವುದು ಎಂದರೆ ಅನ್ಯ ಭಾಷೆಯನ್ನು ದ್ವೇಷಿಸುವುದು ಎಂದರ್ಥವಲ್ಲ. ನಮ್ಮ ಭಾಷೆಯ ಜತೆ ಜತೆಗೆ ಅನ್ಯಭಾಷೆ ಹಾಗೂ ಅನ್ಯಭಾಷಿಗರನ್ನೂ ಪರಸ್ಪರ ಪ್ರೀತಿಸುತ್ತಾ ಸೌಹಾರ್ದ ಹಾಗೂ ಸಾಮರಸ್ಯದಿಂದ ಬಾಳುವುದು ಎಂದರ್ಥ ಎಂದರು.
ನಾವು ಕನ್ನಡಿಗರು ಶಾಂತಿಪ್ರಿಯರು, ಕುವೆಂಪು ಅವರು ಹೇಳುವ ಹಾಗೆ ನಮ್ಮ ನಾಡನ್ನು ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸಲು ಜಾತಿ, ಧರ್ಮ, ಭಾಷೆ, ಗಡಿ ಎಲ್ಲವನ್ನೂ ಮೀರಿ ನಾವೆಲ್ಲರೂ ಸಹೋದರತೆಯಿಂದ ಬಾಳಬೇಕು ಎಂದರು.
ಅಮೃತ ಮಹೋತ್ಸವ ಸ್ವಾತಂತ್ರ್ಯ ದಿನಾಚರಣೆಯ ಕವಾಯತಿನಲ್ಲಿ ಭಾಗವಹಿಸಿ ಜಿಲ್ಲಾಡಳಿತದಿಂದ ದ್ವಿತೀಯ ಬಹುಮಾನ ಪಡೆದಿದ್ದ ಅಬಕಾರಿ ಕಾನ್‌ಸ್ಟೆಬಲ್ಸ್ ತಂಡವನ್ನು ಅಭಿನಂದಿಸಿ ನೆನಪಿನ ಕಾಣಿಕೆ ನೀಡಲಾಯಿತು. ಇದೇ ವೇಳೆ ಗಾಯಕ ಅಮ್ಮ ರಾಮಚಂದ್ರ ಮತ್ತು ತಂಡದಿಂದ ಗೀತಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಗರ ಜಿಲ್ಲಾ ಅಬಕಾರಿ ಉಪಆಯುಕ್ತ ಪಿ.ಮಹೇಶ್‌ಕುಮಾರ್, ಅಬಕಾರಿ ಅಧೀಕ್ಷಕ ಎಂ. ಮಹದೇವು, ಉಪ ಅಧೀಕ್ಷಕ ಎಸ್.ಎಂ.ಮಹೇಶ್, ಕಚೇರಿ ಅಧೀಕ್ಷಕ ಎಂ.ಶ್ರೀನಾಥ್, ಅಬಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ರಾಘವೇಂದ್ರ, ಉಪಾಧ್ಯಕ್ಷ ಎನ್.ಅಜಯ್, ನಾಗೇಶ್ ಇದ್ದರು. ಅಬಕಾರಿ ಉಪಅಧೀಕ್ಷಕ ಎಲ್.ಬಿ.ವಿಕ್ರಮ್, ವಿಜಯಕುಮಾರ್ ಅವರು ಸಂಕಲ್ಪ ವಿಧಿ ಬೋಧಿಸಿದರು.