ಹಾಸನ : ಜಿಲ್ಲೆಯಲ್ಲಿ ಪೊಲೀಸರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅಬಕಾರಿ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರು ಕೇವಲ ವಸೂಲಿ ಕಾರ್ಯದಲ್ಲಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ನೇರವಾಗಿ ಆರೋಪಿಸಿ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಪಂ ಮೊದಲ ತ್ರೈಮಾಸಿಕ ಪ್ರಗತಿ ಪರಿಶೀಲನಾ (ದಿಶಾ) ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅಬಕಾರಿ ಅಧಿಕಾರಿಗಳು ಬಾರ್ ಮಾಲೀಕರ ಹತ್ತಿರ ಪ್ರತಿ ತಿಂಗಳು 35,000 ವಸೂಲಿ ಮಾಡುತ್ತಿದ್ದಾರೆ. ಅಕ್ರಮವನ್ನು ತಡೆಯ ಬೇಕಾದವರೇ ಈ ರೀತಿ ಮಾಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ನನಗೆ ಕೇಳಿಬಂದಿವೆ ಎಂದು ಹೇಳಿದರು.
ಬಾರ್ ಮಾಲೀಕ ಸಂಘದವರೇ ನನ್ನ ಬಳಿ ಬಂದು ದೂರು ನೀಡಿದ್ದು ‘ನಾವು ಪ್ರತಿ ತಿಂಗಳು 35 ಸಾವಿರ ರೂ. ನೀಡುತ್ತಿದ್ದೇವೆ. ಆದರೆ ಸಿಎಲ್ 7 ಆದ ಮೇಲೆ ನಮ್ಮ ವ್ಯಾಪಾರ ಕಡಿಮೆಯಾಗಿದೆ. ಆದ್ದರಿಂದ ಪ್ರತಿ ತಿಂಗಳ ಮಾಮೂಲಿಯನ್ನು ಕಡಿಮೆ ಮಾಡಿಸಿ,’ ಎಂದು ನನ್ನ ಬಳಿ ಹೇಳುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.
ನಾನು ಕಳೆದ ಹಲವು ದಿನಗಳಿಂದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆಗಳನ್ನು ನಡೆಸಿ ಜನರ ಸಮಸ್ಯೆಯನ್ನು ಆಲಿಸುತ್ತಿದ್ದೇನೆ. ಎಲ್ಲೆಡೆಯೂ ಅಕ್ರಮ ಮದ್ಯ ಮಾರಾಟದ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಪೊಲೀಸರು ಒಂದು ತಿಂಗಳಿಗೆ 37ಪ್ರಕರಣ ದಾಖಲು ಮಾಡಿದರೆ ಅಬಕಾರಿ ಇಲಾಖೆ ಅಧಿಕಾರಿಗಳು ಕೇವಲ ಎರಡು ಪ್ರಕರಣ ದಾಖಲಿಸಿದ್ದಾರೆ. ಇದು ನಿಮ್ಮ ಇಲಾಖೆಯ ಅಂಕಿ-ಅಂಶ ಎಂದು ತರಾಟೆ ತೆಗೆದುಕೊಂಡರು.
ಶಾಸಕ ಎಚ್.ಡಿ. ರೇವಣ್ಣ ಮಾತನಾಡಿ, ಹಾಸನ ನಗರದಲ್ಲಿ ಒಂದೇ ರಸ್ತೆಯಲ್ಲಿ 26 ಬಾರುಗಳಿವೆ. ಇದರಿಂದ ಸಾಕಷ್ಟು ಗಲಾಟೆಗಳು ಆಗುತ್ತಿವೆ. ಇದಲ್ಲದೆ ಹಾಸನ ಮತ್ತು ಚನ್ನರಾಯಪಟ್ಟಣದಲ್ಲಿ ಕೊಲೆಗಳು ಹೆಚ್ಚಾಗುತ್ತಿದ್ದು, ಇದಕ್ಕೆ ಪ್ರಮುಖ ಕಾರಣ ಮದ್ಯ ಸೇವನೆ. ಆದರೆ ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ದೂರಿದರು.
ಶಾಸಕ ಸಿ.ಎನ್ ಬಾಲಕೃಷ್ಣ ಮಾತನಾಡಿ, ದುಬಾರಿ ಬೆಲೆಯ ಮದ್ಯದ ಬಾಟಲಿ ತೆಗೆದು ಅದಕ್ಕೆ ಕಡಿಮೆ ಬೆಲೆಯ ಮದ್ಯ ತುಂಬುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿಬಂದಿವೆ. ಆದರೆ ಇದರ ಬಗ್ಗೆ ಒಂದು ದಿನವೂ ಕೂಡ ಯಾವ ಬಾರಿನ ಮೇಲೂ ದಾಳಿ ನಡೆಸಿ ತಪಾಸಣೆ ಮಾಡಿಲ್ಲ ಎಂದು ಆರೋಪಿಸಿದರು.
ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಸಂಸದರು ಕೇಂದ್ರ ಸಚಿವರ ಗಮನ ಸೆಳೆದು ಇದಕ್ಕೆ ಶಾಶ್ವತ ಪರಿಹಾರ ದೊರಕಿಸಿ ಕೊಡಬೇಕು. ಅಲ್ಲದೇ ತೆಂಗಿಗೆ ಹಲವು ರೋಗಗಳು ಬಾಧಿಸುತ್ತಿದ್ದು, ಇದರಿಂದ ತೆಂಗಿನ ಮರ ನಶಿಸಿ ಹೋಗುತ್ತಿವೆ ಎಂದು ಶಾಸಕ ಬಾಲಕೃಷ್ಣ ಒತ್ತಾಯಿಸಿದರು.
ಶಾಸಕ ಸ್ವರೂಪ ಪ್ರಕಾಶ್ ಮಾತನಾಡಿ, ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳಾಗುತ್ತಿವೆ. ಆದ್ದರಿಂದ ಅಲ್ಲಿ ಒಂದು ಪೊಲೀಸ್ ಠಾಣೆಯನ್ನ ತೆರೆಯಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಗಮನಹರಿಸಬೇಕು. ಅಲ್ಲದೆ ನನ್ನ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿದ್ದು ಸಂಸದರು ಮತ್ತು ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ, ಜಿಲ್ಲಾಧಿಕಾರಿ ಸಿ.ಸತ್ಯಭಾಮಾ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಆರ್. ಪೂರ್ಣಿಮಾ, ಎಸ್‌ಪಿ ಹರಿರಾಮ್ ಶಂಕರ್ ಸೇರಿದಂತೆ ಹಲವು ಅಧಿಕಾರಿಗಳು ಹಾಜರಿದ್ದರು
ಮದ್ಯ ಸೇವನೆಯಿಂದ ಕೊಲೆ ಪ್ರಕರಣಗಳು ಹೆಚ್ಚು: ಎಸ್‌ಪಿ
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಗಲಾಟೆ ಹಾಗೂ ಕೊಲೆಗಳಾಗುತ್ತಿರುವುದು ಮದ್ಯ ಸೇವನೆಯಿಂದಾಗಿ. ಆದ್ದರಿಂದ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.
ನಗರದ ರಿಂಗ್ ರಸ್ತೆಯಲ್ಲಿ ಕಳೆದ ಹತ್ತು ದಿನಗಳಿಂದ ಮದ್ಯ ಸೇವನೆ ಹಾಗೂ ಇನ್ನಿತರೆ 21 ಪ್ರಕರಣಗಳನ್ನು ದಾಖಲಿಸಲಾಗಿದೆ. ಮುಂದೆಯೂ ಕೂಡ ಕಾರ್ಯಾಚರಣೆ ಹಮ್ಮಿಕೊಳ್ಳಲಾಗುವುದು. ಇದಲ್ಲದೆ ರೌಡಿಶೀಟರ್ ಹಾಗೂ ಗೂಂಡಾ ಕಾಯ್ದೆಯಡಿ ಹಲವರನ್ನು ವಶಕ್ಕೆ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೇಲೂರು ಶಾಸಕರಿಂದ ರಸ್ತೆ ಕಾಮಗಾರಿಗೆ ತಡೆ
ವಿಧಾನಸಭೆ ಚುನಾವಣೆಗೂ ಮೊದಲೇ ಯಗಚಿ ಜಲಾಶಯದಡಿ ಮಲೆನಾಡು ಅಭಿವೃದ್ಧಿ ವತಿಯಿಂದ 39 ಕೋಟಿ ರೂ. ಅನುದಾನ ತಂದು ಹಲವು ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಈ ಸಂಬಂಧ ಟೆಂಡರ್ ಕರೆದು ಕೆಲಸವೂ ಕೂಡ ಆರಂಭವಾಗಿದೆ. ಆದರೆ ನೂತನವಾಗಿ ಆಯ್ಕೆಯಾಗಿರುವ ಶಾಸಕರು ರಸ್ತೆ ಕಾಮಗಾರಿ ತಡೆದಿದ್ದಾರೆ. ಅವರು ಸಭೆಗೆ ಬಂದಿದ್ದರೇ ನಾನೇ ಮನವಿ ಮಾಡುತ್ತಿದ್ದೆ. ಕಾಮಗಾರಿ ಗುಣಮಟ್ಟದಲ್ಲಿ ಲೋಪವಿದ್ದರೆ ಅದನ್ನು ನಿಲ್ಲಿಸಲಿ. ಅದನ್ನು ಬಿಟ್ಟು ವಿನಾಃಕಾರಣ ಕಾಮಗಾರಿ ತಡೆ ಹಿಡಿಯುವುದು ಸರಿಯಲ್ಲ ಎಂದು ಸಂಸದ ಪ್ರಜ್ವಲ್ ರೇವಣ್ಣ ಅವರು ಬೇಲೂರು ಶಾಸಕ ಎಚ್.ಕೆ. ಸುರೇಶ್ ಹೆಸರೇಳದೆ ಅಸಮಾಧಾನ ವ್ಯಕ್ಯಪಡಿಸಿದರು.
ಎಂಟು ತಿಂಗಳಲ್ಲಿ 11ಸಾವಿರ ಜನರಿಗೆ ನಾಯಿ ಕಡಿತ
ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಈ ಬಾರಿ ಜನವರಿಯಿಂದ ಇಲ್ಲಿಯವರೆಗೆ ಕೇವಲ ಎಂಟು ತಿಂಗಳಲ್ಲಿ 11,817 ಜನರಿಗೆ ನಾಯಿ ಕಚ್ಚಿದ್ದು ಇದರಿಂದ ಇಬ್ಬರು ಮೃತಪಟ್ಟಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ನಾಯಿ ಕಡಿತ ಪ್ರಕರಣಗಳು ಆಗಿವೆ. ಎಲ್ಲಾ ಆಸ್ಪತ್ರೆಗಳಲ್ಲೂ ಅಗತ್ಯ ಪ್ರಮಾಣದಲ್ಲಿ ಔಷಧ ವಿತರಣೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಸ್ವಾಮಿ ತಿಳಿಸಿದರು.
ರೈತರ ಜತೆ ಚೆಲ್ಲಾಟ ಬೇಡ: ಪ್ರಜ್ವಲ್
ಈಗಾಗಲೇ ಜಿಲ್ಲೆಯಲ್ಲಿ ಮಳೆ ಇಲ್ಲದೆ ಬೆಳೆಗಳೆಲ್ಲ ಸಂಪೂರ್ಣವಾಗಿ ನಾಶವಾಗುತ್ತಿವೆ. ಆದರೆ ಸೆಸ್ಕಾಂ ಅಧಿಕಾರಿಗಳು ಸರಿಯಾದ ರೀತಿ ವಿದ್ಯುತ್ ವಿತರಣೆ ಮಾಡದೆ ರೈತರ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
7 ಗಂಟೆ ವಿದ್ಯುತ್ ವಿತರಣೆ ಮಾಡಬೇಕೆಂದು ರಾಜ್ಯ ಸರ್ಕಾರದ ನಿರ್ದೇಶನವಿದೆ. ಆದರೆ ಇವರು ಕೇವಲ 4 ಗಂಟೆ ವಿತರಣೆ ಮಾಡುತ್ತಿದ್ದಾರೆ. ಅದರಲ್ಲಿಯೂ ಲೋಡ್ ಶೆಡ್ಡಿಂಗ್ ನೆಪದಲ್ಲಿ ಕೂಡ ಒಂದು ಗಂಟೆ ವಿದ್ಯುತ್ ತೆಗೆಯುತ್ತಿದ್ದಾರೆ. ಇನ್ನು ಮುಂದೆ ಪ್ರತಿವಾರ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ನೀಡುವ ಸಮಯವನ್ನು ಸೂಚನಾ ಫಲಕವನ್ನು ತಪ್ಪದೇ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಂದೆ- ಮಕ್ಕಳು ಒಂದೇ ವೇದಿಕೆಯಲ್ಲಿ
ಸಮಿತಿ ಸಭೆಯಲ್ಲಿ ಎಚ್.ಡಿ. ರೇವಣ್ಣ ಅವರ ಇಬ್ಬರು ಮಕ್ಕಳು ಪಾಲ್ಗೊಂಡಿದ್ದರು. ವಿಧಾನ ಪರಿಷತ್ ಸದಸ್ಯ ಸೂರಜ್‌ರೇವಣ್ಣ ಇದೇ ಮೊದಲ ಬಾರಿಗೆ ಸಭೆಯಲ್ಲಿ ಭಾಗಿಯಾಗಿದ್ದರು. ಸಂಸದ ಪ್ರಜ್ವಲ್ ರೇವಣ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಮೂಲಕ ದಿಶಾ ಸಭೆಯಲ್ಲಿ ರೇವಣ್ಣ ಮತ್ತು ಮಕ್ಕಳಾದ ಸೂರಜ್ ಹಾಗೂ ಪ್ರಜ್ವಲ್ ಪಾಲ್ಗೊಂಡಿದ್ದರು.