ಕಲಬುರಗಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಅಪರಾಧಿ ಆಕಾಶ ಪೂಜಾರಿಗೆ ೨೦ ವರ್ಷ ಜೈಲು ಶಿಕ್ಷೆ ವಿಧಿಸಿ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಆದೇಶಿಸಿದ್ದಾರೆ. ೨೦೨೧ರ ಜೂ.೧೮ರಂದು ಅಪರಾಧಿ ಆಕಾಶ ಅಪ್ರಾಪ್ತಳನ್ನು ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದಾನೆ. ನಂತರ ಬೆಂಗಳೂರಿಗೆ ಹೋಗುತ್ತೇನೆ. ಬಿಡಲು ರೈಲ್ವೆ ನಿಲ್ದಾಣಕ್ಕೆ ಬಾ ಎಂದು ಕರೆದು ಒತ್ತಾಯಪೂರ್ವಕವಾಗಿ ಬೆಂಗಳೂರಿಗೆ ಕರೆದೊಯ್ದಿದ್ದಾನೆ. ನಂತರ ಪುಣೆಯಲ್ಲಿ ಕೆಲದಿನ ಉಳಿದು ಮರಳಿ ಕಲಬುರಗಿಗೆ ಕರೆತಂದಿದ್ದಾನೆ. ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪಿಐ ದಿಲೀಪಕುಮಾರ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ೨೦ ವರ್ಷ ಜೈಲು, ೪೦ ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಲ್ಲದೆ ಕಾನೂನು ಸೇವಾ ಪ್ರಾಧಿಕಾರದಿಂದ ಸಂತ್ರಸ್ತೆಗೆ ೭ ಲಕ್ಷ ರೂ. ನೀಡಬೇಕು ಎಂದು ಆದೇಶಿಸಿದ್ದಾರೆ. ಪಿಸಿಗಳಾದ ಸವಿತಾ, ಗೀತಾ ಸಾಕ್ಷಿಗಳನ್ನು ಹಾಜರುಪಡಿಸಿದ್ದರು. ಸರ್ಕಾರಿ ಅಭಿಯೋಜಕ ಶಾಂತವೀರ ತುಪ್ಪದ ವಾದಿಸಿದ್ದರು.