ಜಿಲ್ಲೆ

ಅಪ್ಪು ಸ್ಮರಣಾರ್ಥ ಬಸ್ ನಿಲ್ದಾಣ ನಿರ್ಮಾಣ; ವಿದ್ಯಾರ್ಥಿಗಳಿಂದ ಚಮತ್ಕಾರ

ಹಾವೇರಿ: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೆಸರನ್ನು ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ಹೊಸತನ್ನು ಮಾಡಲು ಯೋಚಿಸಿದ ನಗರದ ವಿದ್ಯಾರ್ಥಿಗಳ ತಂಡವೊಂದು 70 ಸಾವಿರ ರೂ. ದೇಣಿಗೆ ಸಂಗ್ರಹಿಸಿ ಸುಂದರವಾದ ಬಸ್ ನಿಲ್ದಾಣವೊಂದನ್ನು ನಿರ್ಮಿಸಿದ್ದಾರೆ.
ಇಜಾರಿ ಲಕಮಾಪುರದ ಸುಭಾಷಚಂದ್ರ ಭೋಸ್ ಬಸ್ ನಿಲ್ದಾಣ ಸಂಪೂರ್ಣವಾಗಿ ಹಾಳಾಗಿತ್ತು. ಇದರಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸುತ್ತಿದ್ದರು. ನಿತ್ಯ ಇದನ್ನು ನೋಡುತ್ತಿದ್ದ ಅಪ್ಪು ಅವರಿಂದ ಪ್ರೇರಿತರಾಗಿದ್ದ ವಿದ್ಯಾರ್ಥಿಗಳ ತಂಡ ಇದಕ್ಕೆ ಹೊಸ ರೂಪ ಕೊಡಲು ನಿರ್ಧರಿಸಿತು.
ನಗರದ ಸಿಂಧಗಿ ಶಾಂತವೀರೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ರಾಜೇಶ, ಆನಂದ ಲಮಾಣಿ, ಗಿರೀಶ ಹಾಗೂ 6ನೇ ತರಗತಿ ವಿದ್ಯಾರ್ಥಿ ಧನರಾಜ್ ನೇತೃತ್ವದ ತಂಡ ಸ್ಥಳೀಯರಾದ ಲಕ್ಷ್ಮಣ ಬಂಡಿವಡ್ಡರ, ಮಂಜುನಾಥ, ಇತರರ ಸಹಕಾರದಿಂದ ಈ ಕೆಲಸ ಮಾಡಿದೆ.
ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು, ಕೆಎಲ್‌ಇ ಜಿಎಚ್ ಕಾಲೇಜು, ಶಾಂತವೀರೇಶ್ವರ ಆಯುರ್ವೇದಿಕ್ ಕಾಲೇಜು, ಎಂಆರ್‌ಎಂ ಕಾಲೇಜು, ಸೇರಿದಂತೆ ಇತರ ಕಾಲೇಜುಗಳಲ್ಲಿ, ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ತಂಡ ಬಸ್ ನಿಲ್ದಾಣಕ್ಕೆಂದು ದೇಣಿಗೆ ಸಂಗ್ರಹಿಸಿದೆ. ಅಪ್ಪು ಅಭಿಮಾನಿಗಳು, ಅಶ್ವಿನಿ ಪುನಿತ್ ರಾಜಕುಮಾರ್ ಸೇರಿ ಎಲ್ಲರಿಂದ ಸುಮಾರು 45 ಸಾವಿರ ರೂ. ಸಂಗ್ರಹಿಸಿದೆ. ನಂತರ ಸ್ಮೈಲ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ನಿಂದ 25 ಸಾವಿರ ರೂ. ದೇಣಿಗೆ ಸೇರಿ ಒಟ್ಟು 65 ಸಾವಿರ ರೂ. ವೆಚ್ಚದಲ್ಲಿ ಸುಂದರವಾದ ಬಸ್ ನಿರ್ಮಿಸಿ, ಅಪ್ಪು ಜನ್ಮದಿನದಂದು ಲೋಕಾರ್ಪಣೆಗೊಳಿಸಿದೆ.
ಕೋಟ್:
ಇತ್ತೀಚೆಗೆ ಬಸ್ ನಿಲ್ದಾಣದ ಬಳಿ ಒಂದು ಅಪಘಾತ ನಡೆಯಿತು. ಅಂದು ಭಾನುವಾರ ಆಗಿದ್ದರಿಂದ ಜನ ಇರಲಿಲ್ಲ. ಈ ಭಾಗದಲ್ಲಿ ಹತ್ತಾರು ಶಾಲಾ- ಕಾಲೇಜುಗಳು ಇರುವುದರಿಂದ ಇಲ್ಲಿ ಸಾವಿರಾರು ವಿದ್ಯಾರ್ಥಿಗಳು ಓಡಾಡುತ್ತಿರುತ್ತಾರೆ. ಬಸ್ ನಿಲ್ದಾಣ ನಿರ್ಮಿಸಿದರೆ ಸಹಾಯವಾಗುತ್ತದೆ ಎಂಬ ಉದ್ದೇಶದಿಂದ ಈ ಕೆಲಸ ಮಾಡಿದ್ದೇವೆ. ಇದಕ್ಕೆ ಅಪ್ಪು ಅವರೇ ಪ್ರೇರಣೆ.
ರಾಜೇಶ, ಶಾಂತವೀರೇಶ್ವರ ಆಯುರ್ವೇದಿಕ್ ಕಾಲೇಜು ವಿದ್ಯಾರ್ಥಿ