ಜಿಲ್ಲೆ

ಅಪ್ಪಟ ಗಾಂಧೀವಾದಿ ಡಾ.ಚಿತ್ತರಂಜನ ಕಲಕೋಟಿ ನಿಧನ

ಗುತ್ತಲ: ಗಾಂಧೀವಾದಿ, ಹಾವೇರಿ ಕ್ಷೇತ್ರದ ಮಾಜಿ ಶಾಸಕ ಡಾ. ಚಿತ್ತರಂಜನ ಕಲಕೋಟಿ (90) ಅವರು ಬೆಳಗಾವಿಯ ಮೊಮ್ಮಗನ ಮನೆಯಲ್ಲಿ ಭಾನುವಾರ ಸಂಜೆ ವಯೋಸಹಜ ಕಾಯಿಲೆಯಿಂದ ನಿಧನರಾದರು. ಕಳೆದ 4 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆಯುವ ಸಂಬಂಧ ಬೆಳಗಾವಿಯಲ್ಲಿಯೇ ವಾಸವಾಗಿದ್ದರು.

ಡಾ. ಚಿತ್ತರಂಜನ ಅವರು ಹುಟ್ಟೂರ ಕೊರಡೂರ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ ಹಾವೇರಿಯಲ್ಲಿ ಪ್ರೌಢಶಾಲೆ, ವಿಜಾಪುರದಲ್ಲಿ ಪಿಯುಸಿ ಮುಗಿಸಿ ನಂತರ ಮಹಾರಾಷ್ಟ್ರದ ಸತಾರದಲ್ಲಿ ಜೆಎಫ್​ಎಎಂ ಪದವಿ ಶಿಕ್ಷಣವನ್ನು 1958ರಲ್ಲಿ ಮುಗಿಸಿ ವೈದ್ಯ ವೃತ್ತಿಯನ್ನು ತಮ್ಮ ಹುಟ್ಟೂರಲ್ಲಿ ಆರಂಭಿಸಿದ್ದರು.

ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಯಾಗಿದ್ದ ವೇಳೆ ಜನತಾ ಪಕ್ಷದಿಂದ 1983ರಲ್ಲಿ ಶಾಸಕರಾಗಿದ್ದ ಡಾ.ಚಿತ್ತರಂಜನ, 1985ರಲ್ಲಿ ಪುನಃ ಶಾಸಕರಾಗಿ ಚುನಾಯಿತರಾದರು. ಅಂದಿನ ಮುಖ್ಯಮಂತ್ರಿ ಎಸ್.ಆರ್. ಬೊಮ್ಮಾಯಿ

ಅವರಿಗೆ ಆಪ್ತರಾಗಿದ್ದರು. ನಂತರ 1999ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ, ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಬಸವರಾಜ ಶಿವಣ್ಣನವರ ವಿರುದ್ಧ ಸೋಲು ಅನುಭವಿಸಿದ್ದರು. ಇದಕ್ಕೂ ಮುನ್ನ ತಾಲೂಕು ಅಭಿವೃದ್ಧಿ ಬೋರ್ಡ್ ಅಧ್ಯಕ್ಷರಾಗಿ, ಎಪಿಎಂಸಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. 1999ರ ಸೋಲಿನ ತರುವಾಯ ರಾಜಕೀಯದಿಂದ ದೂರವೇ ಉಳಿದ್ದರು.

ಇವರು ಶಾಸಕಾರಾಗಿದ್ದ ವೇಳೆ ಸಂಗೂರ ಸಕ್ಕರೆ ಕಾರ್ಖಾನೆ ಹಾಗೂ ಹೊಸರಿತ್ತಿಯ ಗಾಂಧೀ ಗ್ರಾಮೀಣ ಗುರುಕುಲ ಆರಂಭವಾಯಿತು.

2 ವರ್ಷದವರಿದ್ದಾಗ ಸ್ವಾತಂತ್ರ್ಯ ಹೋರಾಟದಲ್ಲಿ ತಾಯಿಯೊಂದಿಗೆ ಜೈಲು ಶಿಕ್ಷೆ ಅನುಭವಿಸಿದ್ದ ಇವರಿಗೆ ಹಳ್ಳಿಕೇರಿ ಗುದ್ಲೆಪ್ಪನವರು ಆದರ್ಶರಾಗಿದ್ದರು. ಅಪ್ಪಟ ಗಾಂಧೀವಾದಿಯಾಗಿದ್ದ ಇವರು ಹಾವೇರಿ ಹಾಗೂ ಹಾನಗಲ್, ಶಿರಹಟ್ಟಿ ತಾಲೂಕು ಒಳಗೊಂಡ ಸುಮಾರು 110 ಹಳ್ಳಿಗಳಲ್ಲಿ ನೀಡಿದ ವೈದ್ಯಕೀಯ ಸೇವೆಯಿಂದ ಹೆಚ್ಚು ಹೆಸರು ಮಾಡಿದ್ದರು.

ಡಾ. ಚಿತ್ತರಂಜನ ಅವರ ಅಂತ್ಯಕ್ರಿಯೆ ಸೋಮವಾರ ಸ್ವಗ್ರಾಮ ಕೊರಡೂರಿನಲ್ಲಿ ಮಧ್ಯಾಹ್ನ 2ಕ್ಕೆ ನೇರವೇರಲಿದೆ ಎಂದ ಪುತ್ರ ದಯಾನಂದ ಕಲಕೋಟಿ ತಿಳಿಸಿದ್ದಾರೆ.

ಅವರಿಗೆ ಪತ್ನಿ ಅನ್ನಪೂರ್ಣಮ್ಮ, ಪುತ್ರ ದಯಾನಂದ ಕಲಕೋಟಿ, ಪುತ್ರಿಯರಾದ ವಿಮಲಾ ಪಾಟೀಲ, ಶೈಲಜಾ ನೆಲವಗಿ ಇದ್ದಾರೆ.