ಮೈಸೂರು: ನಂಜನಗೂಡು ಅಪ್ಪ-ಮಗನ ಅಪಹರಣ ಪ್ರಕರಣವನ್ನು ಜಿಲ್ಲಾ ಪೊಲೀಸರು ವಾರದೊಳಗೆ ಭೇದಿಸಿ, 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 21.10 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಮೂರು ಬೈಕ್, 5 ಡ್ರಾಗನ್, 3 ಲಾಂಗ್, 11 ಮೊಬೈಲ್ ಜಪ್ತಿ ಮಾಡಲಾಗಿದೆ.
ಖಾರದಪುಡಿ ಬಸವ, ಅಭಿ, ಪ್ರಮೋದ್, ಶಶಿಧರ್, ರಾಹುಲ್, ಚಂದು, ಶ್ರೀಧರ್, ಮಧು, ಸಂಜಯ್, ಅಜಯ್ ಬಂಧಿತರು. ಇವರಲ್ಲಿ ತುಮಕೂರು ಜಿಲ್ಲೆಯ ಇಬ್ಬರು, ಮಂಡ್ಯ ಜಿಲ್ಲೆಯ ಇಬ್ಬರು, ಮೈಸೂರು ಜಿಲ್ಲೆ ಬನ್ನೂರಿನ 4 ಜನ, ಕೆ.ಆರ್.ನಗರದ ಇಬ್ಬರಿದ್ದಾರೆ. ತಲೆಮರೆಸಿಕೊಂಡಿರುವ ರವಿ ಎಂಬ 11ನೇ ಆರೋಪಿಗಾಗಿ ಶೋಧ ಮುಂದುವರಿದಿದೆ.
ಫೆ. 6ರಂದು ಮಧ್ಯಾಹ್ನ 12.30ರಲ್ಲಿ ನಂಜನಗೂಡು ತಾಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದ ಹರ್ಷ ಇಂಪೆಕ್ಟ್ ಫ್ಯಾಕ್ಟರಿಯ ಮಾಲೀಕ ದೀಪಕ್ ಮತ್ತು ಅವರ ಮಗ ಹರ್ಷ ಎಂಬಾತನನ್ನು ಅಪಹರಣ ಮಾಡಲಾಗಿತ್ತು. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ, ಗೋದಾಮಿನಲ್ಲಿ ಕೂಡಿ ಹಾಕಿ ಪರಾರಿಯಾಗಿದ್ದರು. ದೀಪಕ್ ಅವರ ಕಾರಿನಲ್ಲೇ ತಂದೆ-ಮಗನನ್ನು ಕಿಡ್ನಾಪ್ ಮಾಡಿ ಜಿಲ್ಲೆಯ ವ್ಯಾಪ್ತಿಯಲ್ಲೇ ಅಲ್ಲಿ ಇಲ್ಲಿ ತಿರುಗಾಡುತ್ತಿದ್ದರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಾಣ ಬೆದರಿಕೆ ಹಾಕಿ ಒಂದು ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಸತತ ಮಾತುಕತೆ ಬಳಿಕ ಅದು 35 ಲಕ್ಷ ರೂ. ಇಳಿಕೆಯಾಯಿತು. ಅಷ್ಟು ಹಣವನ್ನು ಪಡೆದುಕೊಂಡು ಒಂದು ಗಂಟೆಯ ನಂತರ ಮೈಸೂರು ತಾಲೂಕಿನ ಜಲಮಹಲ್ ಬಳಿ ಅದೇ ದಿನ ಸಂಜೆ 6ಕ್ಕೆ ತಂದೆ- ಮಗನನ್ನು ಬಿಟ್ಟುಹೋಗಿದ್ದರು. ಆರೋಪಿಗಳು ನುರಿತ ಅಪರಾಧಿಗಳು ಎಂಬುದು ಅವರ ವರ್ತನೆಯಿಂದ ತಿಳಿದುಬಂತು. ಹೀಗಾಗಿ, ಜೀವಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ತಂದೆ-ಮಗನನ್ನು ಬಿಡುಗಡೆ ಆಗುವವರೆಗೂ ಪೊಲೀಸರು ಸುಮ್ಮನಿದ್ದು ಕೇಸ್ ಮೇಲೆ ನಿಗಾ ವಹಿಸಿದ್ದರು. ಜಿಲ್ಲೆಯ ಎಲ್ಲ ಪೊಲೀಸರನ್ನು ಬಳಸಿಕೊಂಡು ಪ್ರಮುಖ ರಸ್ತೆಯಲ್ಲಿ ನಾಕಾಬಂಧಿ ಹಾಕಿ ತಪಾಸಣೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.
ತಂದೆ-ಮಗನ ಬಿಡುಗಡೆಯ ಬಳಿಕ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗಾಗಿ 3 ತಂಡ ರಚಿಸಲಾಯಿತು. ಖಚಿತ ಮಾಹಿತಿ ಮೇರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮೊದಲನೇ ಆರೋಪಿ ವಿರುದ್ಧ ಈ ಹಿಂದೆ ಮಂಡ್ಯ ಜಿಲ್ಲೆಯ ಪೂರ್ವ, ಪಶ್ಚಿಮ, ಶಿವಳ್ಳಿ, ಕೆ.ಆರ್.ಪೇಟೆ, ಮೈಸೂರಿನ ಮೇಟಗಳ್ಳಿ, ಮಂಡಿ ಠಾಣೆಗಳಲ್ಲಿ ಕೊಲೆ, ಶಸ್ತ್ರಾಸ್ತ್ರ ಕಾಯ್ದೆ, ಎನ್‌ಡಿಪಿಎಸ್ ಸೇರಿದಂತೆ 9 ಪ್ರಕರಣಗಳು ದಾಖಲಾಗಿವೆ. 21ನೇ ವಯಸ್ಸಿನಲ್ಲಿ ಅಪರಾಧ ಕೃತ್ಯ ಎಸಗಿ 11 ವರ್ಷ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರಬಂದ ಬಳಿಕ ಕೃತ್ಯ ಎಸಗಿದ್ದಾನೆ ಎಂದು ಎಸ್ಪಿ ತಿಳಿಸಿದರು.
2ನೇ ಆರೋಪಿ ವಿರುದ್ಧವೂ ಹಿಂದೆ ಮಂಡ್ಯ ಜಿಲ್ಲೆಯ ಶಿವಳ್ಳಿ ಠಾಣೆಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿ ಒಂದು ಪ್ರಕರಣ ದಾಖಲಾಗಿದೆ. 3ನೇ ಆರೋಪಿ ವಿರುದ್ಧ ಮಂಡ್ಯ ಜಿಲ್ಲೆಯ ಶಿವಳ್ಳಿ, ಪಾಂಡವಪುರ, ಪಶ್ಚಿಮ ಠಾಣೆ, ರಾಮನಗರ ಜಿಲ್ಲೆಯ ಕಗ್ಗಲಿಪುರ ಠಾಣೆಗಳಲ್ಲಿ 5 ಕಳ್ಳತನ ಪ್ರಕರಣಗಳಿವೆ. 4ನೇ ಆರೋಪಿ ವಿರುದ್ಧ ಮಂಡ್ಯ ಜಿಲ್ಲೆಯ ಗ್ರಾಮಾಂತರ, ಶಿವಳ್ಳಿ, ಪಾಂಡವಪುರ, ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ. 5ನೇ, 6ನೇ ಆರೋಪಿಗಳ ವಿರುದ್ಧ ಬನ್ನೂರು ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿದೆ. ಎಲ್ಲ ಆರೋಪಿಗಳು ಒಂದಿಲ್ಲೊಂದು ಅಪರಾಧ ಕೃತ್ಯ ಎಸಗಿದ್ದಾರೆ. ಇವರ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದರು.
ಹಣಕ್ಕಾಗಿ ದೀಪಕ್ ಅವರನ್ನು ಒಂದು ವರ್ಷದ ಹಿಂದೆ ಬೆದರಿಸಲಾಗಿತ್ತು. ಆಗ ಅವರು ದೂರವಾಣಿ ಕರೆಯ ಸಂಭಾಷಣೆ, ಮೊಬೈಲ್ ಸಂಖ್ಯೆಯನ್ನು ಸಂಗ್ರಹಿಸಿ ಇಟ್ಟುಕೊಟ್ಟಿದ್ದರು. ವಿಚಾರಣೆ ವೇಳೆ ಇದುವೇ ಸುಳಿವು ನೀಡಿತು. ಇವರ ಕಾರ್ಖಾನೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ನೌಕರನೇ ಆರೋಪಿಗಳಿಗೆ ಮಾಹಿತಿ ನೀಡಿ ಈ ಕೃತ್ಯ ಎಸಗುವಂತೆ ಮಾಡಿದ್ದಾನೆ ಎಂದು ತಿಳಿಸಿದರು.
ಪತ್ತೆ ಕಾರ್ಯದಲ್ಲಿ ನಂಜನಗೂಡಿನ ಡಿವೈಎಸ್‌ಪಿ ಗೋವಿಂದರಾಜು, ಇನ್ಸ್‌ಪೆಕ್ಟರ್ ಶಿವನಂಜಶೆಟ್ಟಿ, ಪಿಎಸ್‌ಐಗಳಾದ ಚೇತನ, ರಮೇಶ್ ಕರಕಿಕಟ್ಟಿ, ಕೃಷ್ಣಕಾಂತ ಕೋಳಿ, ಕಮಲಾಕ್ಷಿ, ಸಿ.ಕೆ.ಮಹೇಶ್, ಪ್ರೊಬೇಷನರಿ ಪಿಎಸ್‌ಐ ಚರಣ್‌ಗೌಡ, ಎಎಸ್‌ಐಗಳಾದ ಶಿವಕುಮಾರ್, ವಸಂತಕುಮಾರ್, ಸಿಬ್ಬಂದಿ ಸುರೇಶ್, ವಸಂತಕುಮಾರ್, ಸುನೀತಾ, ಕೃಷ್ಣ, ಭಾಸ್ಕರ್, ಅಬ್ದುಲ್ ಲತೀಪ್, ನಿಂಗರಾಜು, ಸುರೇಶ್, ಸುಶೀಲ್‌ಕುಮಾರ್, ರಾಜು, ಚೇತನ್, ವಿಜಯ್‌ಕುಮಾರ್, ಮಂಜು, ಚೆಲುವರಾಜು ಇದ್ದರು.
ಈ ತಂಡಕ್ಕೆ ಐಜಿಪಿ ಪ್ರವೀಣ್ ಮಧುಕರ್ ಪವಾರ್ 25 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.
ದೇವರಿಗೂ ಪಾಲು!
ಕದ್ದ ಹಣದಲ್ಲಿ ಪ್ರಮುಖ ಆರೋಪಿ ದೇವರಿಗೆ ಕಾಣಿಕೆ ನೀಡಿರುವ ಸ್ವಾರಸ್ಯಕರ ಸಂಗತಿ ಬೆಳಕಿಗೆ ಬಂದಿದೆ.
ಪ್ರತಿ ದುಷ್ಕೃತ್ಯ ಎಸಗಿದ ಬಳಿಕ ಕದ್ದ ಹಣದಲ್ಲಿ ಇಂತಿಷ್ಟು ಹಣವನ್ನು ದೇವರ ಹುಂಡಿಗೆ ಹಾಕುತ್ತಿದ್ದ. ಅದೇ ರೀತಿ ಈ ಕಿಡ್ನಾಪ್ ಕೇಸ್‌ನ ಬಳಿಕ 55 ಸಾವಿರ ರೂ.ಗಳನ್ನು ಮೂಗೂರು ದೇವಸ್ಥಾನದ ದೇವರಹುಂಡಿಗೆ ಹಾಕಿ, ‘ನನ್ನನ್ನು ಕಾಪಾಡು’ ಎಂದು ದೇವರಲ್ಲಿ ಪ್ರಾರ್ಥಿಸಿದ್ದ. ಆದರೆ, ಆ ದೇವರು ಸಹ ಇವನ ನೆರವಿಗೆ ಬರಲಿಲ್ಲ. ಮತ್ತೆ ಜೈಲು ಪಾಲಾಗುವುದನ್ನೂ ತಪ್ಪಿಸಲಿಲ್ಲ.