ಕಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9-10ನೇ ತರಗತಿ ಮಕ್ಕಳಿಗೆ ಮೊಟ್ಟೆ ವಿತರಣೆಗೆ ಚಾಲನೆ ನೀಡಲಾಯಿತು. ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಶರತ್ ಕೃಷ್ಣಮೂರ್ತಿ, ಸಿ.ಆರ್.ಪ್ರವೀಣ್, ರಾಜಪ್ಪ, ಸಿದ್ದರಾಜುನಾಯ್ಕ ಇತರರಿದ್ದರು. 
ಜಿಲ್ಲೆ

ಅಪೌಷ್ಟಿಕತೆ ನಿವಾರಣೆಗೆ ಮೊಟ್ಟೆ , ಬಾಳೆಹಣ್ಣು ವಿತರಣೆ

ಕಡೂರು: ರಾಜ್ಯ ಸರ್ಕಾರ ಮಕ್ಕಳ ಅಪೌಷ್ಟಿಕತೆ ನಿವಾರಿಸಲು ಎಲ್ಲ ಸರ್ಕಾರಿ ಶಾಲೆ ಮಕ್ಕಳಿಗೂ ಪೌಷ್ಟಿಕ ಆಹಾರ ವಿತರಣೆ ಯೋಜನೆಯನ್ನು ವಿಸ್ತರಿಸಿದೆ ಎಂದು ತಾಪಂ ಇಒ ಸಿ.ಆರ್.ಪ್ರವೀಣ್ ಹೇಳಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 9-10ನೇ ತರಗತಿ ಮಕ್ಕಳಿಗೆ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸರ್ಕಾರ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಮೊಟ್ಟೆ ಹಾಗೂ ಬಾಳೆಹಣ್ಣು ವಿತರಿಸುತ್ತಿದೆ. ಇದೀಗ 9,10ನೇ ತರಗತಿ ಮಕ್ಕಳಿಗೂ ಯೋಜನೆ ವಿಸ್ತರಿಸಲಾಗಿದೆ. ವಾರದಲ್ಲಿ ಮಂಗಳವಾರ ಮತ್ತು ಶುಕ್ರವಾರ ಮೊಟ್ಟೆ ಅಥವಾ ಬಾಳೆಹಣ್ಣು ವಿತರಣೆ ಮಾಡಲಾಗುವುದು. ಖರೀದಿ ಜವಾಬ್ದಾರಿಯನ್ನು ಶಾಲಾಭಿವೃದ್ಧಿ ಸಮಿತಿಗೆ ವಹಿಸಲಾಗಿದೆ. ಮೊಟ್ಟೆಯಿಂದ ಅಪೌಷ್ಟಿಕತೆ ನಿವಾರಣೆಯಾಗಿ ಕಲಿಕಾಮಟ್ಟ ವೃದ್ಧಿಯಾಗಲಿದೆ ಎಂದು ಹೇಳಿದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಸರ್ಕಾರ ಯೋಜನೆ ಜಾರಿಗೊಳಿಸಿದೆ. ಮಕ್ಕಳು ವ್ಯಾಸಂಗದ ವೇಳೆ ದೇಹವನ್ನು ಆರೋಗ್ಯವಂತಾಗಿ ಇಟ್ಟುಕೊಳ್ಳಬಹುದು. ಸದೃಢ ಸಮಾಜ ನಿರ್ಮಾಣಕ್ಕೆ ಆರೋಗ್ಯ ಅಗತ್ಯ ಎಂದರು.
ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಬಡತನ ರೇಖೆಯಲ್ಲಿರುವ ಶಾಲಾ ಮಕ್ಕಳ ಆರೋಗ್ಯ ಕಾಪಾಡಲು ಬಿಸಿಯೂಟದ ಜತೆ ಮೊಟ್ಟೆ ಹಾಗೂ ಬಾಳೆಹಣ್ಣು, ಶೇಂಗಾಚಿಕ್ಕಿ ನೀಡುತ್ತಿರುವುದು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. 2006ರಲ್ಲಿ ಆರಂಭವಾದ ಬಿಸಿಯೂಟದ ಯೋಜನೆ ಇಂದಿಗೂ ಅಡೆತಡೆ ಇಲ್ಲದೆ ಸಮರ್ಪಕವಾಗಿ ನಿರ್ವಹಿಸಲಾಗುತ್ತಿದೆ. ಶಿಕ್ಷಣದ ಜತೆಗೆ ಸರ್ಕಾರದ ಸೌಲಭ್ಯಗಳನ್ನು ಮಕ್ಕಳು ಪಡೆದುಕೊಳ್ಳಬೇಕಿದೆ ಎಂದು ತಿಳಿಸಿದರು.
ಕಡೂರು ಬಿಇಒ ಆರ್.ಸಿದ್ದರಾಜುನಾಯ್ಕ, ಸರ್ಕಾರ ನೌಕರರ ಸಂಘದ ತಾಲೂಕು ಅಧ್ಯಕ್ಷ ಅರೇಹಳ್ಳಿ ಮಲ್ಲಿಕಾರ್ಜುನ್, ಸಿಆರ್‌ಪಿ ಪ್ರೇಮ್‌ಕುಮಾರ್, ತಾಪಂ ತಾಲೂಕು ಯೋಜನಾಧಿಕಾರಿ ವಿಜಯ್‌ಕುಮಾರ್, ಚಿನ್ನರಾಜು, ಕಾಲೇಜು ಪ್ರಾಚಾರ್ಯ ತವರಾಜ್, ಶಿಕ್ಷಕ ಜಯಣ್ಣ ಇತರರಿದ್ದರು.