ಜಿಲ್ಲೆ

ಅಪೌಷ್ಟಿಕ ನಿವಾರಣೆಗೆ ಜನರಲ್ಲಿ ಜಾಗೃತಿ

ಸಿರಗುಪ್ಪ: ಮಕ್ಕಳು, ಗರ್ಭಿಣಿಯರು, ಬಾಣಂತಿಯರು, ಕಿಶೋರಿಯರು ಅಪೌಷ್ಟಿಕತೆ, ರಕ್ತ ಹೀನತೆಯಿಂದ ಬಳಲುತ್ತಿರುವುದರಿಂದ, ಪೌಷ್ಟಿಕತೆ ಹೆಚ್ಚಿಸಿ ಸದೃಢರನ್ನಾಗಿ ಮಾಡಲು ಪೋಷಣೆ ಮಾಸ ಆಚರಿಸಲಾಗುತ್ತಿದೆ ಎಂದು ತಾಲೂಕು ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಪ್ರದೀಪ್ ಕುಮಾರ್ ಹೇಳಿದರು.

ಪಟ್ಟಣದ ಡ್ರೈವರ್ ಕಾಲನಿಯ ಅಂಗನವಾಡಿ ಕೇಂದ್ರದಲ್ಲಿ ತಾಲೂಕು ಆಡಳಿತ, ತಾಪಂ, ಶಿಶು ಅಭಿವೃದ್ಧಿ ಯೋಜನೆ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ಪೋಷಣೆ ಮಾಸಾಚರಣೆ ಹಾಗೂ ಮಾತೃವಂದನಾ ಸಪ್ತಾಹ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

ಗರ್ಭಿಣಿಯರು, ಬಾಣಂತಿಯರು, ಶಿಶುಗಳ ಅಪೌಷ್ಟಿಕತೆ ತಡೆಗಟ್ಟಲು ಇಲಾಖೆಯಿಂದ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಪೂರಕ ಪೌಷ್ಟಿಕ ಆಹಾರ ತಲುಪಿಸಲಾಗುತ್ತಿದೆ. ರಕ್ತಹೀನತೆಯಿಂದ ಬಳಲುತ್ತಿರುವ ಮಕ್ಕಳ ಪಾಲಕರನ್ನು ಕರೆದು ತಿಳಿವಳಿಕೆ ನೀಡಲಾಗುತ್ತಿದೆ.

ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ, ಹಿಂದಿನ ಕಾಲದಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಸಮತೋಲನ ಆಹಾರ ನೀಡಿ ಆರೈಕೆ ಮಾಡಲಾಗುತ್ತಿತ್ತು. ಆದರೆ ಈಗ ಜನರಲ್ಲಿ ಜಾಗೃತಿ ಅಗತ್ಯವಾಗಿರುವುದರಿಂದ ಸರ್ಕಾರ ಪೋಷಣೆ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಬಿ.ಎಂ.ಸತೀಶ್ ಮಾತನಾಡಿ, ಸರ್ಕಾರ ಸಾರ್ವಜನಿಕರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಆದರೆ, ಆ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ. ಪೋಷಣೆ ಮಾಸಾಚರಣೆ ಕಾರ್ಯಕ್ರಮದ ಬಗ್ಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಪ್ರತಿ ಮನೆ ಮನೆಗೆ ಭೇಟಿ ನೀಡಿ ಪರಿಣಾಮಕಾರಿಯಾಗಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.

ಗರ್ಭಿಣಿಯರಿಗೆ ಉಡಿ ತುಂಬಿ ಆರೋಗ್ಯ ಕುರಿತು ಜಾಗೃತಿ ಮೂಡಿಸಲಾಯಿತು. ಸಿ.ಆರ್.ಪಿ.ಮಾರುತಿ, ಮುಖ್ಯಶಿಕ್ಷಕಿ ಶಿವಗಂಗಮ್ಮ, ಪ್ರಮುಖರಾದ ವೆಂಕೋಬ, ಮಲ್ಲೇಶಪ್ಪ, ಸಿದ್ದ, ಖಾಜಪ್ಪ ಇತರರಿದ್ದರು.