ಕೃಷ್ಣಾ ನದಿ 
ಜಿಲ್ಲೆ

ಅಪಾಯಮಟ್ಟದಲ್ಲಿ ಉಕ್ಕುತ್ತಿದೆ ಘಟಪ್ರಭಾ ನದಿ..!

ಬಾಗಲಕೋಟೆ: ಘಟಪ್ರಭಾ ನದಿಗೆ ಅಪಾಯ ಮಟ್ಟದಲ್ಲಿ ನೀರು ಹರಿದು ಬರಲು ಆರಂಭಿಸಿದೆ. ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ಹಾಗೂ ಮುಧೋಳ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ೧೨ ಸೇತುವೆಗಳು ಮುಳುಗಡೆ ಆಗಿದ್ದು, ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬಿಡಲಾದ ನೀರು ಸೇರಿಕೊಂಡರೆ ಸಂಭವನೀಯ ಪ್ರವಾಹ ಪೀಡಿತ ಗ್ರಾಮಗಳಿಗೆ ನೀರು ನುಗ್ಗುವ ಅಪಾಯ ಇದೆ...!

ಮುಖ್ಯವಾಗಿ ಘಟಪ್ರಭಾ ಅಬ್ಬರ ತೀವ್ರಗೊಂಡಾಗ ಮೊದಲು ಪ್ರವಾಹಕ್ಕೆ ಸಿಲುಕುವ ರಬಕವಿ-ಬನಹಟ್ಟಿ ತಾಲೂಕಿನ ನಂದಗಾವ್ ಹಾಗೂ ಮುಧೋಳ ತಾಲೂಕಿನ ಮಿರ್ಜಿ ಗ್ರಾಮದಲ್ಲಿ ನೀರು ನುಗ್ಗುವ ಅಪಾಯ ಇದೆ. ಈ ಹಿನ್ನಲೆಯಲ್ಲಿ ಶುಕ್ರವಾರ ಬೆಳಗ್ಗೆ ಪರಿಸ್ಥಿತಿ ನೋಡಿಕೊಂಡು ಮೊದಲು ಈ ಎರಡು ಗ್ರಾಮಗಳಲ್ಲಿ ಪ್ರವಾಹಕ್ಕೆ ಸಿಲುಕುವ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಅವರು ಈಗಾಗಲೇ ಸಂಬಂಧಪಟ್ಟ ತಹಶೀಲ್ದಾರ್ ಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದ್ದಾರೆ.

ಘಟಪ್ರಭಾಗೆ ೫೭೪೧೬ ಕ್ಯೂಸೆಕ್ ಗೆ ಹೆಚ್ಚಿದ ನೀರಿನ ಹರಿವು :
ಘಟಪ್ರಭಾ ನದಿಗೆ ೨೫ ಸಾವಿರ ಕ್ಯೂಸೆಕ್ ನೀರು ಹರಿದು ಬಂದರೆ ನದಿ ವ್ಯಾಪ್ತಿಯ ಸೇತುವೆಗಳು ಜಲಾವೃತವಾಗುತ್ತವೆ. ಇದಕ್ಕೂ ಹೆಚ್ಚು ನೀರು ಗುರುವಾರ ಹರಿದು ಬಂದಿದ್ದರಿಂದ ೧೨ ಸೇತುವೆಗಳು ಜಲಾವೃತವಾಗಿದೆ. ಗುರುವಾರ ಸಂಜೆಯಿಂದ ಘಟಪ್ರಭಾ ನದಿಗೆ ದೂಪದಾಳದಿಂದ ೪೭೧೪೦ ಕ್ಯೂಸೆಕ್, ಮಾರ್ಕಂಡಯದಿಂದ ೭೩೮೦, ಬಳ್ಳಾರಿ ನಾಲಾದಿಂದ ೨೮೯೬ ಕ್ಯೂಸೆಕ್ ಹಾಗೂ ಹಿಡಕಲ್ ಜಲಾಶಯ ಸೇರಿ ಒಟ್ಟು ೫೭೪೧೬ ಕ್ಯೂನೀರು ಬಿಡಲಾಗಿದೆ.

ಈ ನೀರು ಶುಕ್ರವಾರ ಜಿಲ್ಲೆಯ ವ್ಯಾಪ್ತಿಯಲ್ಲಿ ಹರಿಯುವ ಘಟಪ್ರಭಾ ನದಿಗೆ ಕೂಡಿಕೊಳ್ಳಲಿದ್ದು, ಆಗ ಕೆಲವು ಗ್ರಾಮಗಳಿಗೆ ನೀರು ನುಗ್ಗಲಿದೆ. ಈ ಹಿನ್ನಲೆಯಲ್ಲಿ ಅಗತ್ಯ ಇರುವ ಕಡೆಗೆ ಕಾಳಜಿ ಕೇಂದ್ರ, ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು, ಮೇವು, ಔಷಧ ವ್ಯವಸ್ಥೆ ಮಾಡಿಕೊಳ್ಳಲು ಈಗಾಗಲೇ ಜಿಲ್ಲಾಡಳಿತ ಸಂಬಂಧಪಟ್ಟ ನೊಡಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇನ್ನು ಪ್ರವಾಹ ಸಂದರ್ಭ ಎದುರಾದಾಗ ಅದನ್ನು ಸಮರ್ಥವಾಗಿ ನಿರ್ವಹಿಸಲು ಪ್ರತಿ ಗ್ರಾಮಕ್ಕೂ ಅಽಕಾರಿ ನೇಮಕ ಮಾಡಲಾಗಿದೆ. ಜನ-ಜಾನುವಾರುಗಳಿಗೆ ತೊಂದರೆ ಆಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ಈಗಾಗಲೇ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲೆ ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಮಾರ್ಗದರ್ಶನ ನೀಡಿದ್ದಾರೆ.

ಕೃಷ್ಣಾ ನದಿಗೂ ಹೆಚ್ಚಿನ ನೀರಿನ ಹರಿವು :
ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಮುಂದುವರೆದಿರುವ ಪರಿಣಾಮ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಳವಾಗಿದೆ. ಜಿಲ್ಲೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ ೧೬೭೮೧೫ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ. ಇದರಿಂದ ಚಿಕ್ಕಪಡಸಲಗಿ ಗ್ರಾಮದ ಶ್ರಮಬಿಂದು ಸಾಗರ ಸಂಪೂರ್ಣ ಜಲಾವೃತವಾಗಿದೆ. ಇನ್ನು ಶೂರ್ಪಾಲಿ ಗ್ರಾಮದ ಲಕ್ಷ್ಮೀ ನರಸಿಂಹ ದೇಗುಲವನ್ನು ನೀರು ಸುತ್ತುವರೆಯುತ್ತಿದ್ದು, ಜಮೀನುಗಳಿಗೆ ನೀರು ನುಗ್ಗಿದ್ದು, ಕಬ್ಬು ಹಾಗೂ ಮೆಕ್ಕಜೋಳದ ಬೆಳೆಗಳು ಜಲಾವೃತವಾಗಿವೆ.

ಮತ್ತೊಂದೆಡೆ ಆಲಮಟ್ಟಿ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಗಡೆ ಬಿಡಲಾಗುತ್ತಿದೆ. ಬೆಳಗ್ಗೆ ೨.೨೫ ಲಕ್ಷ ಕ್ಯೂಸೆಕ್ ಇದ್ದ ಹೊರಹರಿವು ಸಂಜೆಹೊತ್ತಿಗೆ ೨.೭೫ ಲಕ್ಷ ಕ್ಯೂಸೆಕ್ ಗೆ ಹೆಚ್ಚಿಸಿದ್ದಾರೆ. ಇದರಿಂದ ಹುನಗುಂದ ತಾಲೂಕಿನ ಭಾಗದಲ್ಲಿ ಪ್ರವಾಹ ಸಂಭವನೀಯ ಗ್ರಾಮಗಳಲ್ಲಿ ಆತಂಕ ಹೆಚ್ಚಾಗಿದೆ. ಜಮೀನುಗಳಿಗೆ ನೀರು ನುಗ್ಗುವ ಅಪಾಯ ಇದೆ.