ಜಿಲ್ಲೆ

ಅಪಾಯದ ಸ್ಥಿತಿಯಲ್ಲಿ ಸಂವಿಧಾನ

ಬೀದರ್: ಡಾ. ಅಂಬೇಡ್ಕರ್ ಅವರ ರಚಿತ ಭಾರತೀಯ ಸಂವಿಧಾನವು ಇಂದು ಅಪಾಯದ ಸ್ಥಿತಿಯಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಆತಂಕ ವ್ಯಕ್ತಪಡಿಸಿದರು.

ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಘಟಕದಿಂದ ನಗರದಲ್ಲಿ ಸಂವಿಧಾನ ಅಂಗೀಕಾರ ದಿನಾಚರಣೆ ನಿಮಿತ್ತ ಆಯೋಜಿಸಿದ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಸಂವಿಧಾನ ನಡೆಸುವ ವ್ಯವಸ್ಥೆ ಸರಿಯಾಗಿಲ್ಲ. ಹೀಗಾಗಿ ಸಂವಿಧಾನಕ್ಕೆ ಕಂಟಕ ಕಾದಿದೆ. ಈ ಬಗ್ಗೆ ಪ್ರತಿಯೊಬ್ಬ ಭಾರತೀಯರು ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯವಿದೆ ಎಂದರು.

ಸಂವಿಧಾನ ಕೇವಲ ದಲಿತರಿಗಾಗಿ ಅಲ್ಲ. ಭಾರತೀಯ ಪ್ರತಿ ಪ್ರಜೆಯ ಹಿತ, ದೇಶದ ಅಭಿವೃದ್ಧಿ ಇದರಲ್ಲಿ ಅಡಕವಿದೆ. ಸಂವಿಧಾನ ಬದಲಿಸುವ ಮಾತುಗಳು ಕೇಳಿಬರುತ್ತಿವೆ. ಆದರೆ ಇದು ಅಸಾಧ್ಯದ ಮಾತು. ಒಂದೊಮ್ಮೆ ಸಂವಿಧಾನ ಬದಲಾದರೆ ದೇಶದಲ್ಲಿ ಮಹಾ ಕ್ರಾಂತಿಯೇ ನಡೆಯಲಿದೆ ಎಂದು ಎಚ್ಚರಿಸಿದರು.

ಉಪನ್ಯಾಸಕ ಸಿದ್ಧಾರ್ಥ ಕಾಂಚೆ ಮಾತನಾಡಿ, ಸಂವಿಧಾನ ರಚನೆ ಮಂಡಳಿಯ 7 ಸದಸ್ಯರ ಪೈಕಿ ಒಬ್ಬರು ಅನಾರೋಗ್ಯ, ಕೆಲವರು ವಿವಿಧ ಕಾರಣದಿಂದ ಕೆಲಸ ಮಾಡಲಿಲ್ಲ. ಹೀಗಾಗಿ ಡಾ. ಅಂಬೇಡ್ಕರ್ ಅವರು ಸಂಪೂರ್ಣವಾಗಿ ಸಂವಿಧಾನ ರಚಿಸಿದರು. ಆದರೆ ಈಗ ಕೆಲವರು ಅಂಬೇಡ್ಕರ್ ಅವರೊಬ್ಬರೇ ಸಂವಿಧಾನ ರಚಿಸಿದ್ದಾರಾ? ಎಂದು ಪ್ರಶ್ನಿಸುತ್ತಿರುವುದು ವಿಷಾದಕರ ಸಂಗತಿ ಎಂದರು.

ಬೆಳಗಾವಿಯ ವಕೀಲ ಡಾ. ಗೌತಮ ಬನ್ಸೂಡೆ, ವೇದಿಕೆ ರಾಜ್ಯಾಧ್ಯಕ್ಷ ಸೂರ್ಯ ಹುಣಸೆ ಎಸ್.ವೆಂಕಟೇಶ ಮಾತನಾಡಿದರು. ಪೂಜ್ಯ ಭಂತೆ ಧಮ್ಮಾನಂದ ಥೆರೊ ಸಾನ್ನಿಧ್ಯ, ಮುಖಂಡ ಶಂಕರರಾವ ದೊಡ್ಡಿ ಅಧ್ಯಕ್ಷತೆ ವಹಿಸಿದ್ದರು. ಮಹಾರಾಷ್ಟ್ರ ಅಮರಾವತಿಯ ಸಂವಿಧಾನ ಮನೋಹರೆ ಹಾಗೂ ತಂಡದಿಂದ ಭೀಮಗೀತೆ ಕಾರ್ಯಕ್ರಮ ಜರುಗಿತು. ಹುಮನಾಬಾದ್ ತಾಪಂ ಅಧ್ಯಕ್ಷ ರಮೇಶ ಡಾಕುಳಗಿ, ದೇವೇಂದ್ರ ಸೋನಿ ಇತರರಿದ್ದರು. ವೇದಿಕೆ ಜಿಲ್ಲಾ ಅಧ್ಯಕ್ಷ ಅಂಬಾದಾಸ ಗಾಯಕವಾಡ ನಿರೂಪಣೆ ಮಾಡಿದರು.