ಹಾನಗಲ್ಲ: ಹಾನಗಲ್ಲ-ತಡಸ್ ರಾಜ್ಯ ಹೆದ್ದಾರಿಯನ್ನು ಮೂರು ವರ್ಷಗಳ ಹಿಂದೆ ಡಿಆರ್ಎನ್ ಕಂಪನಿ ನಿರ್ವಣಗೊಳಿಸಿತ್ತು. ರಸ್ತೆಯ ಎರಡೂ ಪಕ್ಕದಲ್ಲಿ ಗಟಾರಗಳನ್ನು ನಿರ್ವಿುಸಿ ಅದರ ಮೇಲೆ ಪುಟ್ಪಾತ್ ನಿರ್ವಿುಸಲಾಗಿತ್ತು. ಆದರೆ, ಫುಟ್ಪಾತ್ ಕುಸಿದು ಅಲ್ಲಲ್ಲಿ ತಗ್ಗು ಗುಂಡಿಗಳು ನಿರ್ವಣವಾಗಿದ್ದು, ಪಾದಚಾರಿಗಳು ಸಂಕಷ್ಟಪಡುವಂತಾಗಿದೆ.
ಇದೇ ಪುಟ್ಪಾತ್ ಈ ಹಿಂದೆಯೂ ಒಮ್ಮೆ ಹೀಗೆ ಕುಸಿದಿದ್ದರಿಂದ ಲೋಕೋಪಯೋಗಿ ಇಲಾಖೆಯಿಂದ ದುರಸ್ತಿಗೊಳಿಸಲಾಗಿತ್ತು. ಒಂದೇ ವರ್ಷದ ಅವಧಿಯಲ್ಲಿ ಮತ್ತೆ ಕುಸಿತಗೊಂಡಿರುವುದು ಅವರ ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತಾಗಿದೆ. ಪುಟ್ಪಾತ್ಗೆ ಹಾಕಲಾಗಿರುವ ಪೇವರ್ಸ್ಗಳು ಕುಸಿದು ಅಲ್ಲಲ್ಲಿ ತಗ್ಗು ಗುಂಡಿಗಳಾಗಿವೆ. ಗ್ರಾಮೀಣ ಪ್ರದೇಶಗಳಿಂದ ತಾಲೂಕು ಕೇಂದ್ರಕ್ಕೆ ಪ್ರತಿದಿನವೂ ಆಗಮಿಸುವ ಖಾಸಗಿ ವಾಹನಗಳು ಈ ರಸ್ತೆಯಲ್ಲಿ ನಿಲುಗಡೆಗೊಳ್ಳುತ್ತವೆ. ವಾಹನಗಳಿಂದ ಇಳಿದ ಗ್ರಾಮಸ್ಥರು ಪಾದಚಾರಿ ರಸ್ತೆಯ ಮೇಲೆ ತೆರಳುತ್ತಾರೆ. ಈ ವೇಳೆ ಮಹಿಳೆಯರು, ಮಕ್ಕಳು, ವೃದ್ಧರಾದಿಯಾಗಿ ಎಲ್ಲರೂ ಈ ತಗ್ಗುಗಳಲ್ಲಿ ಕಾಲು ಸಿಕ್ಕಿಹಾಕಿಸಿಕೊಳ್ಳುವಂತಾಗುತ್ತಿದೆ. ಕೆಳಗೆ ನೋಡದೆ ಚಲಿಸುವಾಗ ಕೆಲವರು ಗುಂಡಿಯಲ್ಲಿ ಕಾಲು ಇಟ್ಟು ಬಿದ್ದ ಘಟನೆಗಳೂ ನಡೆದಿವೆ. ಒಂದೆರಡು ಬದಿಗೆ ಕುಸಿತವಾಗಿಲ್ಲ, ಹತ್ತಾರು ಕಡೆಗಳಲ್ಲಾಗಿರುವ ಈ ಗುಂಡಿಗಳನ್ನು ಸರಿಪಡಿಸದೇ ಹೋದರೆ ಜನರು ಕಾಲು ಮುರಿದುಕೊಳ್ಳುವುದು ನಿಶ್ಚಿತ.
ಈ ಕುರಿತು ಈ ಪ್ರದೇಶದಲ್ಲಿನ ಹೋಟೆಲ್ಗಳವರು, ವಾಣಿಜ್ಯ ಮಳಿಗೆಗಳವರು ಸೇರಿದಂತೆ ಸ್ಥಳೀಯ ಸಾರ್ವಜನಿಕರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ, ಪ್ರಯೋಜನವಾಗುತ್ತಿಲ್ಲ. ಹೆದ್ದಾರಿ ಕಾಮಗಾರಿ ಮುಗಿದಿದ್ದು, ಸ್ಥಳೀಯ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಲಾಗಿದೆ. ಪಿಡಬ್ಲುಡಿ ಅಧಿಕಾರಿಗಳೇ ಈ ರಸ್ತೆಯನ್ನು ದುರಸ್ತಿ ಮಾಡಬೇಕಿದೆ. ಆದರೆ, ಕಾಮಗಾರಿ ಕೈಗೊಂಡ ಗುತ್ತಿಗೆದಾರರು ನಿರ್ವಹಣೆ ಜವಾಬ್ದಾರಿ ಮರೆತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾದಚಾರಿಗಳು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಪ್ರತಿದಿನ ಶಾಪ ಹಾಕುತ್ತ ಓಡಾಡುವಂತಾಗಿದೆ.
ಈ ಹಿಂದೆಯೂ ಒಂದು ಬಾರಿ ಕುಸಿತವಾಗಿದ್ದ ಪಾದಚಾರಿ ರಸ್ತೆಯನ್ನು ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಪೇವರ್ಸ್ ಬದಲಾಯಿಸಿ ಸರಿಪಡಿಸಿದ್ದರು. ಆದರೆ, ಮತ್ತೆ ಒಂದೇ ವರ್ಷದಲ್ಲಿ ಕುಸಿತವಾಗಿರುವುದು ಕಾಮಗಾರಿಯ ಕುರಿತು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಅಸಡ್ಡತನವನ್ನು ಪ್ರದರ್ಶಿಸಿದೆ. ಕೂಡಲೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನಹರಿಸಿ ಈ ಸಮಸ್ಯೆ ಪರಿಹರಿಸಬೇಕು.| ಮಾರುತಿ ತಾಂದಳೆ, ಸಾಮಾಜಿಕ ಕಾರ್ಯಕರ್ತ ಹಾನಗಲ್ಲಕೆಶಿಪ್ ಮೂಲಕ ನಿರ್ವಣಗೊಂಡ ರಸ್ತೆ ನಮ್ಮ ಇಲಾಖೆಗೆ ಹಸ್ತಾಂತರಗೊಂಡಿದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಅನುದಾನಗಳು ಬಿಡುಗಡೆಯಾಗುತ್ತಿಲ್ಲ. ತಡಸ್-ಹಾನಗಲ್ಲ ರಸ್ತೆಲ್ಲೂ ಅಲ್ಲಲ್ಲಿ ದುರಸ್ತಿ ಕಾರ್ಯವಿದೆ. ಕಾಮಗಾರಿ ಕೈಗೊಳ್ಳಲು ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅನುದಾನ ಬಂದ ಬಳಿಕ ಈ ಪಾದಚಾರಿ ರಸ್ತೆಯನ್ನೂ ಸೇರ್ಪಡೆಗೊಳಿಸಿ, ದುರಸ್ತಿ ಮಾಡಲಾಗುವುದು. ಹಿಂದೊಮ್ಮೆ ಪೇವರ್ಸ್ ತೆಗೆದು ಹಾಕಿ ದುರಸ್ತಿಗೊಳಿಸಿದ್ದೇವೆ. ಈ ಬಾರಿ ಹಾಗಾಗದಂತೆ ಮುತುವರ್ಜಿ ವಹಿಸಲಾಗುವುದು.| ಪಿ.ಎಂ. ಶೆಟ್ಟಿಕೇರಿ, ಎಇಇ ಪಿಡಬ್ಲುಡಿ, ಹಾನಗಲ್ಲ