ಹಾಸನ: ನಗರದ ರಿಂಗ್ ರಸ್ತೆಯ ಭಗತ್ ಸಿಂಗ್ ರೋಡ್ ಬದಿಯಲ್ಲಿ ಮರವೊಂದು ಸಂಪೂರ್ಣ ಒಣಗಿ ಹೋಗಿದ್ದು, ಯಾವಾಗ ಬೇಕಾದರೂ ಮುರಿದು ಬೀಳುವ ಹಂತದಲ್ಲಿದೆ. ಈ ಮರದ ಮಧ್ಯೆದಲ್ಲಿಯೇ ಹಲವು ವಿದ್ಯುತ್ ಲೈನ್‌ಗಳು ಹಾದು ಹೋಗಿವೆ. ಒಂದು ವೇಳೆ ಮರ ಮುರಿದು ಬಿದ್ದರೆ ಅದರೊಂದಿಗೆ ವಿದ್ಯುತ್ ತಂತಿಗಳು ಹರಿದು ಕೆಳಗೆ ಬಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದ್ದರೂ ಸೆಸ್ಕಾಂ ಹಾಗೂ ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ.
ಜೋರು ಮಳೆ ಅಥವಾ ಜೋರು ಗಾಳಿ ಬೀಸಿದರೆ ಸಂಪೂರ್ಣ ಒಣಗಿ ಹೋಗಿರುವ ಮರ ಧರೆಗುರುಳಲಿದೆ. ಇದರ ಜತೆಗೆ ಮರ ನಡುವೆ ಹಾಯ್ದು ಹೋಗಿರುವ ವಿದ್ಯುತ್ ತಿಂತಿಗಳೊಂದಿಗೆ ಎರಡು ವಿದ್ಯುತ್ ಕಂಬಗಳು ನೆಲಕ್ಕುರುಳಲಿವೆ. ರಿಂಗ್ ರಸ್ತೆಯಾಗಿರುವುದರಿಂದ ಇಲ್ಲಿ ನೂರಾರು ವಾಹನಗಳು, ಪಾದಚಾರಿಗಳು ಸಂಚರಿಸುತ್ತಿರುತ್ತಾರೆ. ಈ ವೇಳೆ ಮರ ಬಿದ್ದರೆ ಭಾರೀ ಅಪಾಯವೇ ಎದುರಾಗುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಪುಟ್ಟಸ್ವಾಮಿ ಗೌಡ ಅವರು, ಇಲ್ಲಿ ನಿತ್ಯ ನೂರಾರು ಜನರು ತಿರುಗಾಡುತ್ತಿರುತ್ತಾರೆ. ಅಕ್ಕಪಕ್ಕದಲ್ಲಿ ಅಂಗಡಿಗಳಿವೆ. ಮರ ಬಿದ್ದರೆ ಅದರೊಂದಿಗೆ ವಿದ್ಯುತ್ ಕಂಬಗಳು ಬೀಳಲಿವೆ. ಇದರಿಂದ ದೊಡ್ಡ ಮಟ್ಟದ ಅನಾಹುತ ಸಂಭವಿಸಿದರೂ ಸಂಭವಿಸಬಹುದು. ಸೆಸ್ಕಾಂ ಅಧಿಕಾರಿಗಳು, ನಗರಸಭೆ ಹಲವು ಅಧಿಕಾರಿಗಳು ಅಧಿಕಾರಿಗಳು ಇದೇ ರಸ್ತೆಯಲ್ಲಿ ತಿರುಗಾಡುತ್ತಿದ್ದರೂ ಯಾರೊಬ್ಬರೂ ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ. ಅಪಾಯನ ಸೂಚನೆ ನೀಡುತ್ತಿರುವ ಈ ಮರವನ್ನು ಶೀಘ್ರದಲ್ಲೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.