ಜಿಲ್ಲೆ

ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಫ್ಲೆಕ್ಸ್:ಕಣ್ಮುಚ್ಚಿ ಕುಳಿತ ನಗರಸಭೆ

ಹಾಸನ: ನಗರದ ಪ್ರಮುಖ ರಸ್ತೆಗಳಲ್ಲಿ ರಾಜಾಜಿಸುತ್ತಿರುವ ಫ್ಲೆಕ್ಸ್ ಮತ್ತು ಕಟೌಟ್‌ಗಳು ಸೌಂದರ್ಯ ಹಾಳು ಮಾಡುತ್ತಿರುವುದು ಮಾತ್ರವಲ್ಲದೆ ಗಾಳಿಗೆ ವಾಲಾಡುತ್ತಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ.
ಕಂಬಳ ಉತ್ಸವಕ್ಕೆ ಮತ್ತು ಇತರೆ ಕಾರ್ಯಕ್ರಮಗಳ ನಿಮಿತ್ತ ಅಳವಡಿಸಲಾಗಿದ್ದ ನೂರಾರು ಫ್ಲೆಕ್ಸ್‌ಗಳು ಈಗಲೂ ಇವೆ. ಇದರ ಜೊತೆಗೆ ಸಚಿವರಿಗೆ ಸ್ವಾಗತ ಕೋರುವ ಕಟೌಟ್‌ಗಳು ಅವಾಂತರ ಸೃಷ್ಟಿಸುವ ಸಾಧ್ಯತೆ ಹೆಚ್ಚಾಗಿದೆ.
ನಗರದ ತಣ್ಣೀರುಹಳ್ಳದಿಂದ ಡೇರಿ ವೃತ್ತದ ವರೆಗೆ ರಸ್ತೆಯ ಎರಡೂ ಬದಿ ಕಟೌಟ್‌ಗಳದ್ದೇ ಹಾವಳಿಯಾಗಿದೆ. ಹಾಸನಾಂಬ ಜಾತ್ರಾ ಮಹೋತ್ಸವ, ನೂತನ ಕಟ್ಟಡಗಳ ಉದ್ಘಾಟನೆ, ರಾಜ್ಯ ಮಟ್ಟದ ಕಂಬಳ, ಮಹನೀಯರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಹಾಗೂ ಸಚಿವರುಗಳಿಗೆ ಸ್ವಾಗತ ಕೋರುವ ಕಟೌಟ್‌ಗಳು ಮಿತಿಮೀರಿವೆ. ಪ್ರಮುಖವಾಗಿ ಎನ್.ಆರ್.ವೃತ್ತ, ತಣ್ಣೀರುಹಳ್ಳ ವೃತ್ತ, ಡೇರಿ ವೃತ್ತದಲ್ಲಿ ರಸ್ತೆಗಿಂತ ಫ್ಲೆಕ್ಸ್‌ಗಳು ಕಾಣಿಸುತ್ತವೆ. ನಗರದ ಹೃದಯ ಭಾಗದಲ್ಲಿ ಬೈಕ್, ಕಾರು ಚಾಲನೆ ಕಷ್ಟ ಎನ್ನುವಷ್ಟರ ಮಟ್ಟಿಗೆ ಕಣ್ಣಿಗೆ ರಾಚುತ್ತಿವೆ.
ಶುಕ್ರವಾರ ಬೆಳಗ್ಗೆ ರಿತೇಶ್ ಎಂಬ ಬೈಕ್ ಸವಾರ ನಗರಸಭೆ ಸಮೀಪ ಹೋಗುತ್ತಿದ್ದಾಗ ಭಾರಿ ಗಾತ್ರದ ಕಟೌಟ್‌ವೊಂದು ರಸ್ತೆಗೆ ಬಿದ್ದಿದೆ. ದಿಢೀರನೆ ಬಿದ್ದ ಕಟೌಟ್‌ನಿಂದ ಕಕ್ಕಾಬಿಕ್ಕಿಯಾದ ಸವಾರ ಒಂದುಕ್ಷಣ ಅವಾಕ್ಕಾಗಿದ್ದಾರೆ. ಬೈಕ್ ಎರಡು ಹೆಜ್ಜೆ ಮುಂದೆ ಹೋಗಿದ್ದರೂ ಆತನ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿತ್ತು. ಅದೇ ರೀತಿ ಹಾಸನಾಂಬ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ರೈಲ್ವೆ ನಿಲ್ದಾಣ ಮುಂಭಾಗ ಎಲ್‌ಇಡಿ ಪರದೆ ಧರೆಗುರುಳಿ ಅವಾಂತರ ಸೃಷ್ಟಿಯಾಗಿತ್ತು. ಇಷ್ಟೆಲ್ಲ ಆದರೂ ನಗರಸಭೆ ಕಟೌಟ್‌ಗಳನ್ನು ತೆರವುಗಳಿಸಲು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಗತಿ ಪರಿಶೀಲನಾ ಸಭೆಗಾಗಿ ಇತ್ತೀಚೆಗಷ್ಟೇ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ, ಕಂದಾಯ ಸಚಿವ ಕೃಷ್ಣಭೈರೇಗೌಡ, ಕೃಷಿ ಸಚಿವ ಚಲುವರಾಯಸ್ವಾಮಿ ಅವರಿಗೆ ಸ್ವಾಗತ ಕೋರಲು ಹಾಕಿದ್ದ ಕಟೌಟ್‌ಗಳು ಜನರ ಆಕ್ರೋಶಕ್ಕೆ ಕಾರಣವಾಗಿದ್ದವು. ಜಿಲ್ಲಾ ಪಂಚಾಯಿತಿ ಕಟ್ಟಡ ಸಂಪೂರ್ಣ ಮಾಯವಾಗಿ ಕೇವಲ ಫ್ಲೆಕ್ಸ್‌ಗಳೇ ಕಾಣಿಸುತ್ತಿದ್ದವು. ಕಾಂಗ್ರೆಸ್ ಕಾರ್ಯಕರ್ತರ ಈ ವರ್ತನೆಗೆ ಮೂಗುದಾರ ಹಾಕುವ ಕೆಲಸಕ್ಕೆ ಜಿಲ್ಲಾಡಳಿತ ಏಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆ ಕಾಡುತ್ತಿದೆ.
ನಗರಸಭೆ ನಿರ್ಲಕ್ಷೃ ಏಕೆ?
ರಸ್ತೆಯ ಎಲ್ಲೆಂದರಲ್ಲಿ ಕಟೌಟ್‌ಗಳನ್ನು ಅಳವಡಿಸಬಾರೆಂದು ಸುಪ್ರೀಂ ಕೋರ್ಟ್ ಆದೇಶವಿದೆ. ಆದರೆ, ಹಾಸನದಲ್ಲಿ ಮಾತ್ರ ಯಾವ ಕಾನೂನು ಪಾಲನೆಯಾಗುತ್ತಿಲ್ಲ. ಯಾರೇ, ಫ್ಲೆಕ್ಸ್‌ಗಳನ್ನ ಅಳವಡಿಸಬೇಕೆಂದರೂ ನಗರಸಭೆ ಜಾಗ ಗೊತ್ತು ಮಾಡಿಕೊಡಬೇಕು ಹಾಗು ಇಂತಿಷ್ಟು ಶುಲ್ಕ ಪಾವತಿಸಿಕೊಳ್ಳಬೇಕು. ಆದರೆ, ರಾತ್ರಿ ಕಳೆದು ಬೆಳಕಾಗುವಷ್ಟರಲ್ಲಿ ಕಾಣಿಸಿಕೊಳ್ಳುವ ಫ್ಲೆಕ್ಸ್‌ಗಳಿಗೆ ನಗರಸಭೆ ಹೇಗೆ ಅನುಮತಿ ನೀಡುತ್ತದೆ ಎಂಬುದೇ ಅರ್ಥವಾಗುತ್ತಿಲ್ಲ. ಇನ್ನಾದರು ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಯತ್ತ ಗಮನಹರಿಸಬೇಕಿದೆ.