ಜಿಲ್ಲೆ

ಅಪಾಯಕ್ಕೆ ಆಹ್ವಾನ ನೀಡುತ್ತಿದೆ ಕುಸಿದ ಸೇತುವೆ!

ರೋಣ: ತಾಲೂಕಿನ ಬಾಚಲಾಪೂರ ಕ್ರಾಸ್ ಹತ್ತಿರ ನೀರಾವರಿ ನಿಗಮದವರು ನಿರ್ವಿುಸಿದ ಮಲಪ್ರಭಾ ಬಲದಂಡೆ ಕಾಲುವೆಯ ಸೇತುವೆ ಭಾಗಶಃ ಕುಸಿದಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಕಾಲುವೆ ಕುಸಿದು ಒಂದು ತಿಂಗಳು ಕಳೆಯುತ್ತಾ ಬಂದರೂ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ.

ಪಟ್ಟಣದ ಬಹುತೇಕ ರೈತರು ಈ ಮಾರ್ಗವಾಗಿಯೇ ಜಮೀನಿಗಳಿಗೆ ತೆರಳುತ್ತಾರೆ. ದನ-ಕರುಗಳು, ಚಕ್ಕಡಿ, ಟ್ರ್ಯಾಕ್ಟರ್​ಗಳು ಸಂಚರಿಸುತ್ತವೆ. ಇಲ್ಲಿ ಯಾವುದೇ ವಿದ್ಯುತ್ ದೀಪ ಅಳವಡಿಸಲಾಗಿಲ್ಲ. ಹೀಗಾಗಿ, ಸ್ವಲ್ಪ ಆಯ ತಪ್ಪಿದರೂ ಪ್ರಾಣಕ್ಕೆ ಸಂಚಕಾರ ತಪ್ಪಿದ್ದಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಭಾಗದ ರೈತರ ಜಮೀನುಗಳಿಗೆ ನೀರು ಒದಗಿಸುವ ನಿಟ್ಟಿನಲ್ಲಿ ಕಳೆದ ಹತ್ತಾರು ವರ್ಷಗಳ ಹಿಂದೆ ನಿರ್ವಿುಸಿದ ಕೆನಾಲ್ ಒಂದು ಹನಿ ನೀರೂ ಕಂಡಿಲ್ಲ. ರೈತರಿಗೆ ಪೂರಕವಾಗಿರಬೇಕಿದ್ದ ಕಾಲುವೆಗಳು ಹಾಳಾಗಿವೆ. ಏನಾದರೂ ಅನಾಹುತ ಸಂಭವಿಸುವ ಮೊದಲೇ ಸರಿಪಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಕಾಲುವೆಗಳ ಅಧುನೀಕರಣ ಯೋಜನೆಯಡಿ 279 ಕೋಟಿ ರೂ. ವೆಚ್ಚದ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕಾಲುವೆಗಳ ದುರಸ್ತಿ ಕಾಮಗಾರಿಗಳನ್ನು ಶೀಘ್ರ ಕೈಗೊಳ್ಳಲಾಗುವುದು. | ಜೆ.ಬಿ. ಮಡಿವಾಳರ, ನೀರಾವರಿ ನಿಗಮ ಇಂಜಿನಿಯರ್