ಜಿಲ್ಲೆ

ಅಪರೂಪದ ಸಾಧಕ ಜಿ.ಎ. ಶಿವಲಿಂಗಯ್ಯ

ಗ್ರಂಥ ಸಂಪಾದನೆಯ ಸಂಶೋಧನಾ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಕವಿಯ ಆತ್ಮದೊಳಗೆ ಪ್ರವೇಶಿಸಿ ಹೊರಬಂದು ಬರಹವನ್ನು ವಿಮರ್ಶಿಸಬೇಕಾಗುತ್ತದೆ. ಅಂತಹ ಅಪರೂಪದ ಸಾಧಕ ಜಿ.ಎ.ಶಿವಲಿಂಗಯ್ಯ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ವಿಶ್ರಾಂತ ನಿರ್ದೇಶಕ ಲಕ್ಷ್ಮೀನಾರಾಯಣ ಅರೋರ ಅಭಿಪ್ರಾಯಪಟ್ಟರು.


ಕಮಲಮ್ಮ, ಬಿ.ಎ.ಶಿವಲಿಂಗಯ್ಯ ಧಾರ್ಮಿಕ ದತ್ತಿ ಸಂಸ್ಥೆ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಸಂಶೋಧನೆಯನ್ನು ಜೀವನದ ಭಾಗವನ್ನಾಗಿ ಮಾಡಿಕೊಂಡವರು ಶಿವಲಿಂಗಯ್ಯನವರು. ಇಂದಿನ ಯುವ ಪೀಳಿಗೆಗೆ ಅವರು ಆದರ್ಶ ಎಂದರು.


ಪ್ರಸ್ತುತ ಕೆಲವು ಸಂಘ, ಸಂಸ್ಥೆಗಳು ಸ್ವಹಿತಾಸಕ್ತಿಗೆ ಅಥವಾ ಅಲ್ಲಿರುವ ಕೆಲವರ ಹಿತಾಸಕ್ತಿಗೆ ಕೆಲಸ ಮಾಡುತ್ತಿವೆ. ಅದಕ್ಕೆ ಬದಲಾಗಿ ಸಾರ್ವಜನಿಕ ಕೆಲಸಕ್ಕೆ ಮುಂದಾದರೆ ಸಮಾಜದಲ್ಲಿ ಬದಲಾವಣೆ ಕಾಣಬಹುದಾಗಿದೆ. ಈ ಸಂಸ್ಥೆಯು ಕೂಡ ಸಾಮಾಜಿಕ ಸೇವೆಗೆ ಮುಡಿಪಾಗಿ ಹೆಚ್ಚಿನ ಸೇವಾ ಕಾರ್ಯವನ್ನು ಮುಂದುವರಿಸಬೇಕು ಎಂದು ಆಶಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ವಿಶೇಷ ಕಾರ್ಯದರ್ಶಿ ಬಿ.ನಾಗಭೂಷಣ್ ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದರೆ ಅವರ ಬದುಕು ತಾನಾಗೇ ರೂಪುಗೊಳ್ಳುತ್ತದೆ. ಪಾಲಕರು ಆ ಬಗ್ಗೆ ಗಮನಹರಿಸಬೇಕು ಎಂದರು.


ಮಕ್ಕಳು ಕೂಡ ಜ್ಞಾನಾರ್ಜನೆಗೆ ಆದ್ಯತೆ ನೀಡಿದರೆ ಬದುಕು ಸುಂದರವಾಗುತ್ತದೆ. ಉನ್ನತ ಸ್ಥಾನಮಾನ ಅಲಂಕರಿಸುವುದೇ ಪಾಲಕರಿಗೆ ನೀಡುವ ಬಲುದೊಡ್ಡ ಉಡುಗೊರೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಕಥೆಗಾರ್ತಿ ಬಿ.ಆರ್. ನಾಗರತ್ನಾ ಅವರಿಗೆ ದಿ.ಜಿ.ಎಸ್.ವಿಜಯಲಕ್ಷ್ಮೀ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಕೃತ ವಿದ್ವಾನ್ ದಯಾನಂದ್, ಶಿಕ್ಷಕ ವೈ.ಎನ್.ರಾಜೇಶ್, ಸಹಾಯಕ ಪ್ರಾಧ್ಯಾಪಕರಾದ ಡಾ.ಸಪ್ನಾ, ಡಾ.ಎಚ್.ಎಂ. ಸುನೀಲ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. 18ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಿಸಲಾಯಿತು.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಜಿ.ಎ.ಶಿವಲಿಂಗಯ್ಯ, ಸಂಸ್ಕೃತ ನಿವೃತ್ತ ಪ್ರಾಧ್ಯಾಪಕ ಎಂ.ಮಲ್ಲಣ್ಣ, ವಿಶ್ರಾಂತ ಸಂಶೋಧಕಿ ಡಾ.ವೈ.ಸಿ. ಭಾನುಮತಿ, ಕರ್ನಾಟಕ ರಾಜ್ಯ ಶಿವಾರ್ಚಕ ಸಂಘದ ಅಧ್ಯಕ್ಷ ಎಸ್.ಪ್ರದೀಪ್, ಸಂಸ್ಥೆಯ ಉಪಾಧ್ಯಕ್ಷ ಬಿ.ಬಸವರಾಜು, ಪ್ರಧಾನ ಕಾರ್ಯದರ್ಶಿ ಸಿ.ಸುಬ್ರಹ್ಮಣ್ಯ, ಸಹ ಕಾರ್ಯದರ್ಶಿ ಕುಮಾರಸ್ವಾಮಿ, ಖಜಾಂಚಿ ಎಚ್.ಜೆ. ಬಸವಲಿಂಗಪ್ಪ ಮತ್ತಿತರರು ಇದ್ದರು.