ವಿಜಯವಾಣಿ ಸುದ್ದಿಜಾಲ ಧಾರವಾಡ
ಡಿ. ದೇವರಾಜ ಅರಸು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿನಿಲಯಗಳ ಪರಿಕಲ್ಪನೆಯನ್ನು ರಾಜ್ಯಕ್ಕೆ ನೀಡಿದ್ದಾರೆ. ಇಂತಹ ಆದರ್ಶ ವ್ಯಕ್ತಿಗಳು ನಮಗೆ ಸ್ಫೂರ್ತಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ನಗರದ ಆಲೂರು ವೆಂಕಟರಾವ್ ಸಭಾ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ ಅರಸು ಅವರ 108ನೇ ಜನ್ಮದಿನಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ಚಳವಳಿಯ ನಾಯಕರಾಗಿ ಅವರು ಅನುಸರಿಸಿಕೊಂಡು ಬಂದ ಬದ್ಧತೆ ಮತ್ತು ತತ್ವ ಸಿದ್ಧಾಂತಗಳು ಅವರನ್ನು ಮೇರು ಮಟ್ಟಕ್ಕೆ ಏರಿಸಿದೆ. ನಾಡು ಕಂಡ ಮತ್ಸದ್ದಿ ನಾಯಕ. ಅರಸು ನಾಡಿನ ಚರಿತ್ರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾಗ 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿ, ಕನ್ನಡ ಭಾಷೆಯನ್ನು ಆಡಳಿತ ಭಾಷೆ ಎಂದು ಘೋಷಿಸಲಾಯಿತು. ಅಚ್ಚಳಿಯದ ಸಾಮಾಜಿಕ ಕಾರ್ಯಗಳ ಮೂಲಕ ಕನ್ನಡಿಗರ ಮನಸ್ಸಿನಲ್ಲಿ ಸದಾಕಾಲ ಉಳಿದಿದ್ದಾರೆ ಎಂದರು.
ಕರ್ನಾಟಕ ಜಾನಪದ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ವೆಂಕನಗೌಡ ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸರೋಜ ಹಳಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಡಿ.ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಆರ್.ಎನ್. ದಿಡ್ಡಿಬಾಗಿಲು, ಅಧಿಕಾರಿಗಳು, ವಿದ್ಯಾರ್ಥಿಗಳು, ಇತರರು ಇದ್ದರು.
ರವಿ ಕುಲಕರ್ಣಿ ನಿರೂಪಿಸಿದರು.