ಗುಬ್ಬಿ: ಕಾನೂನಿನ ಬಗ್ಗೆ ಜಾಗೃತಿ ಮೂಡಿಸಿದಲ್ಲಿ ಅಪರಾಧ ಹಾಗೂ ಹಿಂಸೆ ತಡೆಗಟ್ಟಲು ಸಾಧ್ಯ ಎಂದು ಗುಬ್ಬಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶೆ ಡಿ.ಎಸ್.ವಿನುತಾ ಅಭಿಪ್ರಾಯಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿಧಾನ್ ಸೆ ಸಮಾಧಾನ್ ಹಾಗೂ ಬಾಲಕಾರ್ಮಿಕ ನಿಮೂರ್ಲನಾ ಅಭಿಯಾನದಲ್ಲಿ ಮಾತನಾಡಿ, ಹುಟ್ಟಿನಿಂದ ಎಲ್ಲರೂ ಸಮಾನರಾಗಿದ್ದರೂ, ಬೆಳೆಯುತ್ತಾ ತಾರತಮ್ಯ ಅನುಸರಿಸುವುದು ವಿಪರ್ಯಾಸದ ಸಂಗತಿ. ಸಮಾಜದಲ್ಲಿರುವ ಅನ್ಯಾಯ ಹಾಗೂ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಅನೇಕ ಕಾನೂನುಗಳನ್ನು ರೂಪಿಸಲಾಗಿದೆ. ಸಮಾಜದಲ್ಲಿ ಅನುಭವದ ಕಣಜಗಳಂತಿರುವ ಹಿರಿಯ ನಾಗರಿಕರ ಸಂರಕ್ಷಣೆಗಾಗಿಯೇ ವಿಶೇಷ ಕಾನೂನುಗಳಿದ್ದು, ಯಾವುದೇ ಅನ್ಯಾಯಕ್ಕೆ ಒಳಗಾದಲ್ಲಿ ಹಿರಿಯ ನಾಗರಿಕರು ರಕ್ಷಣೆ ಪಡೆಯಲು ಸಾಧ್ಯವಾಗುವುದು ಎಂದರು.
ಪ್ರಾಚಿನ ಕಾಲದಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಇಂದಿಗೂ ಮುಂದುವರಿಯುತ್ತಿರುವುದು ದುರದೃಷ್ಟಕರ. ಮಹಿಳೆಯರ ಮತ್ತು ಮಕ್ಕಳ
ರಕ್ಷಣೆಗಾಗಿ ವಿಶೇಷ ಕಾನೂನು ರೂಪಿಸಲಾಗಿದ್ದು, ಅವುಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು. ಕಾನೂನುಗಳಿಂದ
ಮಾತ್ರ ಸಮಾಜವನ್ನು ತಿದ್ದಲು ಸಾಧ್ಯವಾಗುವುದರಿಂದ ಎಲ್ಲರೂ ಕಾನೂನು ಅನುಸರಿಸಿ ಉತ್ತಮ ಸಮಾಜ ನಿರ್ಮಿಸಲು ಬದ್ಧರಾಗಬೇಕು ಎಂದರು.
ಸಿಡಿಪಿಒ ಮಹೇಶ್ ಮಾತನಾಡಿ, ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆಯ ಬಗ್ಗೆ ನಿರಂತರವಾಗಿ ನಿಗಾ ವಹಿಸಲಾಗುತ್ತಿದೆ. ಮಹಿಳಾ ದೌರ್ಜನ್ಯ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗ್ರಾಮೀಣ ಭಾಗಗಳಲ್ಲಿ ನಿರಂತರವಾಗಿ ಜಾಗ್ರತೆ ವಹಿಸಿ ಮಹಿಳೆಯರ ಮತ್ತು ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳಬೇಕುಎಂದು ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಿಬ್ಬಂದಿಗೆ ಸೂಚಿಸಿದರು.
ಕಾರ್ಮಿಕ ನಿರೀಕ್ಷಕ ತಿಲಕ್ ಮಾತನಾಡಿ, ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕುವನಿಟ್ಟಿನಲ್ಲಿ ಹೋಟೆಲ್ಗಳು, ಅಂಗಡಿ-ಗಳು, ಕಾರ್ಖಾನೆಗಳಿಗೆನಿರಂತರ ಭೇಟಿ ನೀಡಿ ಅರಿವು ಮೂಡಿಸುವ ಜತೆಗೆ ಎಚ್ಚರಿಕೆ ನೀಡಲಾಗುತ್ತಿದೆ. ಯಾರೇ ಕಾನೂನು ಉಲ್ಲಂಘಿಸಿದರೂ ಕ್ರಮ ಕೈಗೊಳ್ಳಲಾಗುವುದು ಎಂದರು.ಇದೇ ವೇಳೆ ವಕೀಲರಾದ ಗೀತಾ ಮತ್ತು ಮನು ಕಾನೂನಿನ ಕುರಿತು ಉಪನ್ಯಾಸ ನೀಡಿದರು. ಕಾನೂನು ಸೇವಾ ಪ್ರಾಧಿಕಾರದ ಸಿಬ್ಬಂದಿ, ಮಹಿಳಾ ಮತ್ತು ಮಕ್ಕಳ ಇಲಾಖೆ ಸಿಬ್ಬಂದಿ,ಅಂಗನವಾಡಿ ಕಾರ್ಯಕರ್ತೆಯರು, ಹಿರಿಯ ನಾಗರಿಕರು, ವಿಶೇಷ ಚೇತನರು ಭಾಗವಹಿಸಿದ್ದರು.