ಮದ್ದೂರು: ತೂಬಿನಕೆರೆ ಗ್ರಾಮದ ಮದ್ದೂರು- ತುಮಕೂರು ಹೆದ್ದಾರಿಯಲ್ಲಿ ಬುಧವಾರ ಮುಂಜಾನೆ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಪೂಜಾ ಕುಣಿತ ಕಲಾವಿದ ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ತೂಬಿನಕೆರೆ ಗ್ರಾಮದ ಕೃಷ್ಣೇಗೌಡರ ಪುತ್ರ, ಪೂಜಾ ಕುಣಿತ ಕಲಾವಿದ ನಂಜುಂಡಸ್ವಾಮಿ (36) ಮೃತರು. ಮಂಗಳವಾರ ರಾತ್ರಿ ತಾಲೂಕಿನ ಮಾದನಾಯಕನಹಳ್ಳಿ ಗ್ರಾಮದಲ್ಲಿ ಅದ್ದೂರಿಯಾಗಿ ಪೂಜಾ ಕುಣಿತ ಕಾರ್ಯಕ್ರಮ ನಡೆಸಿಕೊಟ್ಟು ಎಲ್ಲರಿಂದ ಮೆಚ್ಚುಗೆ ಗಳಿಸಿ ಮುಂಜಾನೆ ಗ್ರಾಮಕ್ಕೆ ವಾಪಸ್ ಬೈಕ್‌ನಲ್ಲಿ ಬರುತ್ತಿದ್ದಾಗ ಮಾಚಹಳ್ಳಿ ಬಳಿಯ ಡಾಬಾ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ.
ಸ್ಥಳಕ್ಕೆ ಕೆಸ್ತೂರು ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ ನಂತರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಕಲಾವಿದ ನಂಜುಂಡಸ್ವಾಮಿ ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ಪೂಜಾ ಕುಣಿತ ನಡೆಸಿಕೊಂಡು ಪ್ರಸಿದ್ಧಿಯಾಗಿದ್ದರು. ಇವರ ಸಾವು ಪೂಜಾ ಕುಣಿತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ನಿಧನಕ್ಕೆ ಕರ್ನಾಟಕ ಜನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೀಲಾರ ಕೃಷ್ಣೇಗೌಡ, ತಾಲೂಕು ಅಧ್ಯಕ್ಷ ಚಾಮನಹಳ್ಳಿ ಮಂಜು ಸಂತಾಪ ಸಲ್ಲಿಸಿದ್ದಾರೆ.