ಬೆಂಗಳೂರು ಗ್ರಾಮಾಂತರ: ಕರೊನಾ ಮೊದಲ ಅಲೆ ವೇಳೆ ಕರೊನಾ ಲಸಿಕೆ ಪಡೆಯದಂತೆ ಅಪಪ್ರಚಾರ ಮಾಡಿದವರೇ ಇಂದು ಲಸಿಕೆ ಲಭ್ಯವಿಲ್ಲ ಎಂದು ದೂರುತ್ತಿದ್ದಾರೆ. ಅವರ ಅಪಪ್ರಚಾರದಿಂದ ಇಂದಿಗೂ ಹಲವು ಸಾರ್ವಜನಿಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪೌರಾಡಳಿತ ಮತ್ತು ಸಕ್ಕರೆ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಕಿಡಿಕಾರಿದರು.
ಹೊಸಕೋಟೆ ತಾಲೂಕು ಅನುಗೊಂಡನಹಳ್ಳಿ ಹೋಬಳಿ ಕಲ್ಕುಂಟೆ ಅಗ್ರಹಾರ ಪಂಚಾಯಿತಿಯ ಎಸ್.ನಾರಾಯಣಕೆರೆದಲ್ಲಿ ಸೋಮವಾರ ಎಂಟಿಬಿ ಚಾರಿಟಬಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಉಚಿತ ಕರೊನಾ ವ್ಯಾಕ್ಸಿನ್ ಅಭಿಯಾನದಲ್ಲಿ ಮಾತನಾಡಿದರು.
ಕರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಸಲುವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಕರೊನಾ ಮೊದಲ ಅಲೆ ವೇಳೆ ಅಭಿಯಾನದ ಮಾದರಿಯಲ್ಲಿ ಲಸಿಕೆ ವಿತರಣೆಗೆ ಮುಂದಾಯಿತು. ಆದರೆ ಪ್ರತಿಪಕ್ಷದವರು ಲಸಿಕೆ ಹಾಕಿಸಿಕೊಂಡರೆ ಆರೋಗ್ಯದ ಮೇಲೆ ಅಡ್ಡಪರಿಣಾಮವಾಗುತ್ತದೆ ಎಂದು ಅಪಪ್ರಚಾರ ಮಾಡಿದರು. ಇದರಿಂದ ಸಾರ್ವಜನಿಕರು ಆತಂಕಗೊಂಡು ಲಸಿಕೆ ಪಡೆಯಲು ಮುಂದೆ ಬರಲಿಲ್ಲ. ಈಗ ಜನ ಎಚ್ಚೆತ್ತಿದ್ದಾರೆ. ಎಲ್ಲರೂ ವ್ಯಾಕ್ಸಿನ್ ಪಡೆಯಲು ಮುಂದಾಗಿದ್ದಾರೆ. ಇದರಿಂದ ಸಹಜವಾಗಿ ಬೇಡಿಕೆ ಹೆಚ್ಚಿದ್ದು ಲಸಿಕೆ ಪೂರೈಕೆಯಲ್ಲಿ ಸ್ವಲ್ಪ ವಿಳಂಬವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಪ್ರತಿ ಪ್ರಜೆಗೂ ಲಸಿಕೆ ನೀಡುವ ಸರ್ಕಾರದ ಯೋಜನೆ ಯಶಸ್ವಿಯಾಗಲಿದೆ ಎಂದು ಹೇಳಿದರು.
ಕಾರ್ಮಿಕರಿಗೆ ಕಿಟ್: ಹೊಸಕೋಟೆ ತಾಲೂಕಿನಲ್ಲಿ ಸುಮಾರು 10 ಸಾವಿರ ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರನ್ನು ಗುರುತಿಸಿದ್ದು ಸರ್ಕಾರ ಎಲ್ಲರಿಗೂ ಕಾರ್ಮಿಕ ಇಲಾಖೆ ವತಿಯಿಂದ ಕಿಟ್ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ, ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕ ವರ್ಗದ ಕಷ್ಟಕ್ಕೆ ಸರ್ಕಾರ ಸ್ಪಂದಿಸಿದೆ ಎಂದು ಹೇಳಿದರು.
ರೈತರ ಸಂಕಷ್ಟಕ್ಕೆ ನೆರವು: ಜಿಲ್ಲೆಯಲ್ಲಿ ಸರಿಯಾದ ಮಳೆಯಿಲ್ಲದೆ ಸಣ್ಣ ಮತ್ತು ಮಧ್ಯಮ ರೈತರು ಕಂಗಾಲಾಗಿದ್ದಾರೆ. ಅವರ ಸಂಕಷ್ಟಕ್ಕೆ ಸ್ಪಂದಿಸುವಂತೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದು ಸಚಿವರು ತಿಳಿಸಿದರು.
ತಾಲೂಕಿನಲ್ಲಿ ಪ್ರಮುಖ ನೀರಿನ ಯೋಜನೆಯಾದ ಏತ ನೀರಾವರಿ ಯೋಜನೆ ಕಾಮಗಾರಿ ವೇಗ ಪಡೆದುಕೊಂಡಿದೆ. ಇನ್ನು ನಾಲ್ಕೇ ತಿಂಗಳಲ್ಲಿ ಕೆರೆಗಳು ಭರ್ತಿಯಾಗಲಿದ್ದು ಈ ಭಾಗದಲ್ಲಿ ಅಂತರ್ಜಲಮಟ್ಟ ವೃದ್ಧಿಸಲಿದೆ. ಕಾಡುಗೋಡಿ ಬಳಿ ಪೈಪ್‌ಲೈನ್ ಕಾಮಗಾರಿ ಚುರುಕುಗೊಂಡಿದೆ. ಸ್ಥಳಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿದ್ದು ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ ಎಂದರು.