ಹನೂರು: ತಾಲೂಕಿನ ಕೌದಳ್ಳಿ- ಭದ್ರಯ್ಯನಹಳ್ಳಿ ಮಾರ್ಗದಲ್ಲಿ ಗುರುವಾರ ಕೆಎಸ್‌ಆರ್‌ಟಿಸಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ.
ತಾಲೂಕಿನ ಶೆಟ್ಟಳ್ಳಿ ಗ್ರಾಮದ ಜಡೇಸ್ವಾಮಿ ಎಂಬುವರ ಪುತ್ರ ಗುಣಶೇಖರ್ (19) ಮೃತ ದುರ್ದೈವಿ. ಈತ ಕೊಳ್ಳೇಗಾಲದ ನಿಸರ್ಗ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಹಾಸ್ಟೆಲ್‌ನಲ್ಲಿ ವಾಸವಿದ್ದ. ಆದರೆ ಸಂಕ್ರಾಂತಿ ಹಬ್ಬದ ಹಿನ್ನೆಲೆ ಊರಿಗೆ ಬಂದಿದ್ದ. ಗುರುವಾರ ಬೆಳಗ್ಗೆ 8ರ ವೇಳೆಯಲ್ಲಿ ಬೈಕ್‌ನಲ್ಲಿ ಕಾಲೇಜಿಗೆ ತೆರಳುತ್ತಿದ್ದಾಗ ಭದ್ರಯ್ಯನಹಳ್ಳಿ ಕೌದಳ್ಳಿ ಮಾರ್ಗಮಧ್ಯೆ ಎದುರು ಬಂದ ಬಸ್ ನಡುವೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡ ಈತನನ್ನು ಕುಟುಂಬಸ್ಥರು ತುರ್ತು ವಾಹನದ ಮೂಲಕ ಕಾಮಗೆರೆಯ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ಮಾರ್ಗಮಧ್ಯೆಯೇ ಈತ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ರಾಮಾಪುರ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೃತದೇಹವನ್ನು ಹನೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ನೀಡಿದರು. ಈ ಸಂಬಂಧ ಬಸ್ ಹಾಗೂ ಬೈಕ್ ವಶಕ್ಕೆ ಪಡೆದ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
ಮುಗಿಲು ಮುಟ್ಟಿದ ಆಕ್ರಂದನ:
ಸುದ್ದಿ ತಿಳಿದು ಕಾಮಗೆರೆ ಖಾಸಗಿ ಆಸ್ಪತ್ರೆಗೆ ಆಗಮಿಸಿದ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಚಿಕ್ಕ ವಯಸ್ಸಿನಲ್ಲೇ ಮೃತಪಟ್ಟ ವಿದ್ಯಾರ್ಥಿಯ ಬಗ್ಗೆ ನೆರೆದಿದ್ದವರು ಮರುಕ ವ್ಯಕ್ತಪಡಿಸಿದರು.