ಜಿಲ್ಲೆ

ಅಪಘಾತದಲ್ಲಿ ಮೂವರಿಗೆ ಗಾಯ

ಅಥಣಿ ಗ್ರಾಮೀಣ: ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸೇರಿ ಹಿಂಬದಿ ಕುಳಿತ ಇಬ್ಬರು ಗಂಭೀರ ಗಾಯಗೊಂಡ ಘಟನೆ ಅಥಣಿ ತಾಲೂಕಿನ ಬಡಚಿ ಗ್ರಾಮದ ಶಿವಾಜಿ ವೃತ್ತದ ಬಳಿಯ ಸಂಕೇಶ್ವರ-ಜೇವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ನಡೆದಿದೆ.

ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ ಕುಮಾರ ಪಡಸಲಗಿ (39), ಪುತ್ರ ಸಂಕೇತ ಪಡಸಲಗಿ (10), ಸಹೋದರಿ ರಾಯಬಾಗ ತಾಲೂಕಿನ ಸಿದ್ಧಾಪುರ ಗ್ರಾಮದ ಕಮಲವ್ವ ಡೊಳ್ಳಿ (45) ಗಾಯಗೊಂಡವರು. ಘಟನಟ್ಟಿ ಗ್ರಾಮದಿಂದ ಬಡಚಿ ಮಾರ್ಗವಾಗಿ ಮುಚ್ಚಂಡಿ ಗ್ರಾಮದ ಧರೇಪ್ಪ ದೇವಸ್ಥಾನಕ್ಕೆ ತೆರಳುತ್ತಿರುವ ವೇಳೆ ದುರ್ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಅಥಣಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಐಗಳಿ ಪಿಎಸ್‌ಐ ಚಂದ್ರಶೇಖರ ಸಾಗನೂರ, ತನಿಖಾಸಹಾಯಕ ಲಕ್ಷ್ಮಣ ಅಜ್ಜಣಗಿ, ಪ್ರಕಾಶ ಕುರಿ, ಸಂಜು ಸನಗೊಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.