ಕಲಬುರಗಿ: ಚಿಂಚೋಳಿಯಲ್ಲಿ ರೌಡಿ ಶೀಟರ್‌ಗಳ ಸಭೆ ಮುಗಿಸಿ ರಟಕಲ್ ಠಾಣೆಗೆ ವಾಪಸ್ ಆಗುವ ವೇಳೆ ಮಾರ್ಗದಲ್ಲಿ ಕಾರು ಅಪಘಾತವಾಗಿ ಪಿಎಸ್‌ಐ ಸೇರಿ ಮೂವರು ಗಾಯಗೊಂಡಿದ್ದಾರೆ. ರಟಕಲ್ ಠಾಣೆ ಪಿಎಸ್‌ಐ ಗಂಗಮ್ಮ ಸಂತೋಷ, ಕಾನ್‌ಸ್ಟೇಬಲ್ ಲಕ್ಷ್ಮೀ ಶರಣಪ್ಪ ಹಾಗೂ ಕಾರು ಚಾಲಕ ಅಭಿಷೇಕ ಸೋಮಶೇಖರ ಗಾಯಗೊಂಡಿದ್ದಾರೆ. ಅತಿವೇಗ ಮತ್ತು ನಿಷ್ಕಾಳಜಿ ಚಾಲನೆ ಆರೋಪದಲ್ಲಿ ಅಭಿಷೇಕ ವಿರುದ್ಧ ಸುಲೇಪೇಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಇಲಾಖೆಯ ವಾಹನ ಕೆಟ್ಟಿದ್ದರಿಂದ ಹೆಡ್‌ಕಾನ್‌ಸ್ಟೆಬಲ್ ಮಹಾಂತೇಶ ಅವರ ಖಾಸಗಿ ಕಾರಿನಲ್ಲಿ ರೌಡಿ ಶೀಟರ್ ಸಭೆಗೆ ಹೋಗಿದ್ದರು ಎನ್ನಲಾಗಿದೆ. ಸಭೆ ಮುಗಿಸಿ ವಾಪಸ್ ಆಗುವಾಗ ರಾತ್ರಿ ೯.೩೦ರ ಸುಮಾರಿಗೆ ಸುಲೇಪೇಟ ಸಮೀಪದಲ್ಲಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಗೆ ಉರುಳಿ ಬಿದ್ದು, ಅಪಘಾತ ಸಂಭವಿಸಿದೆ.