ಜಿಲ್ಲೆ

ಅಪಘಾತದಲ್ಲಿ ಪತ್ನಿ ಸಾವು, ಪತಿ, ಪುತ್ರಿಗೆ ತೀವ್ರ ಗಾಯ

ಮಳವಳ್ಳಿ: ತಾಲೂಕಿನ ಕ್ಯಾತೇಗೌಡನದೊಡ್ಡಿ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ದಂಪತಿ ತೆರಳುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಮೃತಪಟ್ಟು, ಎರಡು ವರ್ಷದ ಮಗು, ತಂದೆ ತೀವ್ರವಾಗಿ ಗಾಯಗೊಡ್ಡಿದ್ದಾರೆ.

ತಾಲೂಕಿನ ಅಮೃತೇಶ್ವರನಹಳ್ಳಿ ಗ್ರಾಮದ ಮಹದೇವು ರವರ ಪತ್ನಿ ಮಾಲಾಶ್ರೀ (29) ಮೃತೆ. ಪತಿ ಮಹದೇವು, ಪುತ್ರಿ ಎರಡು ವರ್ಷದ ತಾನ್ವಿ ಗಾಯಾಳುಗಳು.
ಇವರು ತಮ್ಮ ಬೈಕ್‌ನಲ್ಲಿ ಸ್ವಗ್ರಾಮದಿಂದ ಪಟ್ಟಣಕ್ಕೆ ಕಾರ್ಯನಿಮಿತ್ತ ಹೋಗುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ವೇಗವಾಗಿ ಬಂದ ಕಾರು ಡಿಕ್ಕಿಹೊಡೆದು ಅಪಘಾತ ಸಂಭವಿಸಿ, ಬೈಕ್‌ನಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡರು. ಕೂಡಲೇ ಸ್ಥಳೀಯರು ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಕರೆತಂದರು. ಪ್ರಥಮ ಚಿಕಿತ್ಸೆಯ ನಂತರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಮಾಲಾಶ್ರೀ ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ಅವರನ್ನು ಬೆಂಗಳೂರಿನ ನಿಮ್ಹಾನ್ಸ್‌ಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟರು.
ಪತಿ ಮಹದೇವು, ಪುತ್ರಿ ತಾನ್ವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವಘಡದ ನಂತರ ಕಾರನ್ನು ಚಾಲಕ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.