ಹುಲಿಯೂರುದುರ್ಗ: ಹುಲಿಯೂರುದುರ್ಗ ರಾಜ್ಯ ಹೆದ್ದಾರಿ&85ರಲ್ಲಿ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಬೆಕ್ಕರಳೆ ಗ್ರಾಮದ ಆನಂದ್(50) ಮೃತ. ಪತ್ನಿ ಸುನೀತಾ (45)ಗಂಭೀರವಾಗಿ ಗಾಯಗೊಂಡಿದ್ದಾರೆ. ಕೌಡ್ಲೆ ಗ್ರಾಮದ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ತೆರಳುತ್ತಿದ್ದ ವೇಳೆ ಮಾರ್ಗ ಮಧ್ಯೆ ನೀಲಸಂದ್ರ ಗ್ರಾಮದ ಬಳಿ ಎದುರಿಗೆ ಬಂದ ಕಾರಿಗೆ ಡಿಕ್ಕಿ ತಪ್ಪಿಸಿಕೊಳ್ಳಲು ಬೈಕ್ ಅನ್ನು ಆನಂದ್ ಎಡಕ್ಕೆ ತಿರುಗಿಸಿದ ವೇಳೆ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ತೀವ್ರವಾಗಿ ಗಾಯಗೊಂಡ ಆನಂದ್ ಸ್ಥಳದಲ್ಲೇ ಮೃತಪಟ್ಟಿದ್ದು, ಆತನ ಪತ್ನಿ ಸುನೀತಾ ಗಂಭೀರವಾಗಿ ಗಾಯಗೊಂಡಿದ್ದು, ಮಾಗಡಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಮಯಕ್ಕೆ ಬಾರದ ಆಂಬುಲೆನ್ಸ್: ಅಪಘಾತ ಸಂಭವಿಸಿದ ತಕ್ಷಣ ಗಾಯಾಳು ಕರೆದೊಯ್ಯಲು ನೀಲಸಂದ್ರ ಗ್ರಾಮಸ್ಥರು 108 ಆಂಬುಲೆನ್ಸ್ಗೆ ಕರೆ ಮಾಡಿ ಒಂದು ಗಂಟೆಯಾದರೂ ಕುಣಿಗಲ್, ಹುಲಿಯೂರುದುರ್ಗ ಅಥವಾ ಮಾಗಡಿಯಿಂದ ಯಾವುದೇ ಆಂಬುಲೆನ್ಸ್ ಬರಲಿಲ್ಲ. ಕೊನೆಗೆ ಅಪಘಾತದಲ್ಲಿ ಆನಂದ್ ಸಂಬಂಧಿಕರು ಕೌಡ್ಲೆ ಗ್ರಾಮದಿಂದ ಬಂದ ಬಳಿಕ ಸುನೀತಾರನ್ನು ಆಸ್ಪತ್ರೆಗೆ ಕರೆದೊಯ್ದರು. ತೀವ್ರವಾಗಿ ಗಾಯಗೊಂಡಿದ್ದ ಆನಂದ್ ಸ್ಥಳದಲ್ಲೇ ಅರ್ಧಗಂಟೆಗೂ ಹೆಚ್ಚು ಕಾಲ ಒದ್ದಾಡಿ ಪ್ರಾಣಬಿಟ್ಟರು ಎಂದು ಸ್ಥಳಿಯರು ಆಕ್ರೋಶ ಹೊರಹಾಕಿದರು.