ಹಲಗೂರು: ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಮೃತನಾಗಿದ್ದು, ಇಬ್ಬರು ತೀವ್ರ ಗಾಯಗೊಂಡ ಘಟನೆ ಸಮೀಪದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ನಡೆದಿದೆ.
ಹಲಗೂರು ಗ್ರಾಪಂ ಸದಸ್ಯ ಹಫೀಜ್ ಉಲ್ಲಾಖಾನ್ ಅವರ ಪುತ್ರ ಇಸ್ಮಾಯಿಲ್(38) ಮೃತ. ಮೈಸೂರಿನಿಂದ ಹಲಗೂರಿಗೆ ಪತ್ನಿ, ಪುತ್ರನ ಸಮೇತ ಸೋಮವಾರ ತಡರಾತ್ರಿ ಕಾರಿನಲ್ಲಿ ಬರುತ್ತಿದ್ದರು.
ಬಸವನಪುರದ ಸಮೀಪ ಎದುರಿನಿಂದ ಬಂದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಛಿದ್ರಗೊಂಡು ಇಸ್ಮಾಯಿಲ್ ತಲೆಗೆ ತೀವ್ರ ಪೆಟ್ಟಾಯಿತು. ಅವರು ಸ್ಥಳದಲ್ಲೇ ಮೃತರಾದರು. ಪತ್ನಿ ರಿಜ್ವಾನ್, ಪುತ್ರ ಇಮಾಮ್ ರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಳವಳ್ಳಿ ಆಸ್ಪತ್ರೆಯಲ್ಲಿ ಮಂಗಳವಾರ ಇಸ್ಮಾಯಿಲ್ ಶವದ ಮರಣೋತ್ತರ ಪರೀಕ್ಷೆ ನಡೆಸಿ, ವಾರಸುದಾರರಿಗೆ ನೀಡಲಾಗಿದೆ. ಹಲಗೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.