ಜಿಲ್ಲೆ

ಅಪಘಾತದಲ್ಲಿ ಕರ್ನಾಟಕ 3ನೇ ಸ್ಥಾನ

ರೇವಣಸಿದ್ದಪ್ಪ ಪಾಟೀಲ್

ಬೀದರ್: ರಸ್ತೆ ಅಪಘಾತ ಪ್ರಕರಣಗಳಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನದಲ್ಲಿದ್ದರೆ, ದೇಶದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ತಿಳಿಸಿದರು.
ಜಿಲ್ಲಾ ಪೊಲೀಸ್ ರಿಂದ ನಗರದ ಮಾಮನಕೇರಿ ಸಮೀಪದ ಜ್ಞಾನಸುಧಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ವರ್ಷ 332 ಜನ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಸಕ್ತ ವರ್ಷ ಈವರೆಗೆ 172 ಜನ ಮೃತಪಟ್ಟದ್ದಾರೆ ಎಂದರು.
ಸಂಚಾರ ನಿಯಮ ಪಾಲನೆ ಮಾಡದ್ದರಿಂದ ರಸ್ತೆ ಅಪಘಾತದಲ್ಲಿ ಹೆಚ್ಚಿನ ಸಾವು-ನೋವು ಸಂಭವಿಸುತ್ತಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಹಾಗೂ ಕಾರು ಚಾಲಕರು ಸೀಟ್ ಬೆಲ್ಟ್ ಧರಿಸುವುದಿಲ್ಲ. ಇಂಥ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದ ವಾಹನ ಸವಾರರು ಅಪಘಾತದಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು. ನಿಗದಿತ ವೇಗದ ಮಿತಿಯಲ್ಲಿ ಓಡಿಸಬೇಕು. ಏಕಮುಖ ಸಂಚಾರ ಬೇಡ. ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಬೇಡ ಮತ್ತು ಅಗತ್ಯ ಸ್ಥಳದಲ್ಲಿ ಇಂಡಿಕೇಟರ್ ಕಡ್ಡಾಯ ಹಾಕಬೇಕು. ರಸ್ತೆ ಸುರಕ್ಷತೆ ಫಲಕಗಳನ್ನು ಕಡ್ಡಾಯ ಅನುಸರಿಸಬೇಕು. ರಸ್ತೆಯಲ್ಲಿ ಓಡಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ವಾಹನ ಚಲಾಯಿಸುವಾಗ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಬೇಕು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಹಾಗೂ ಸೀಟ್ ಬೆಲ್ಟ್ ಧರಿಸದೆ ಕಾರಿನಲ್ಲಿ ಓಡಾಡಲು ಅವಕಾಶ ಮಾಡಿಕೊಡಬಾರದು. ಸಾಮಥ್ರ್ಯಕ್ಕಿಂತ ಹೆಚ್ಚಿನ ಲೋಡ್ ತುಂಬಿಸಬಾರದು. ಸುರಕ್ಷತೆ ನಿಯಮ ಪಾಲಿಸಿ ಓವರ್ ಟೇಕ್ ಮಾಡಬೇಕು. ಬೈಕ್ನಲ್ಲಿ ಮೂವರು ಹೋಗಬಾರದು. ಅತಿ ವೇಗವಾಗಿ ವಾಹನ ಚಲಾಯಿಸಬಾರದು ಎಂದು ವಿದ್ಯಾರ್ಥಿಗಳು ಪಾಲಕರಲ್ಲಿ ತಿಳಿವಳಿಕೆ ಮೂಡಿಸಬೇಕು ಎಂದು ಹೇಳಿದರು.
ಅಪಘಾತ ನಂತರದ ಮೊದಲ ಗಂಟೆಯನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಈ ವೇಳೆ ತ್ವರಿತವಾಗಿ ವೈದ್ಯಕೀಯ ಆರೈಕೆ ನೀಡಿದರೆ ಗಾಯಗೊಂಡವರು ಬದುಕುಳಿಯುವ ಸಾಧ್ಯತೆ ಇದೆ. ಅಲ್ಲದೆ ಅವರ ಗಾಯದ ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದೆ. ಹೀಗಾಗಿ ರಸ್ತೆ ಅಪಘಾತ ಆಗಿರುವುದನ್ನು ನೋಡಿದ ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಬೇಕು. ಸಹಾಯ ಮಾಡಿದವರಿಗೆ ಕಾನೂನಿನಲ್ಲಿ ತೊಂದರೆ ಆಗುವುದಿಲ್ಲ ಎಂದರು.
ಚಾಲಕರು ರಸ್ತೆ ನಿಯಮ ಮತ್ತು ಸಂಚಾರ ಚಿಹ್ನೆಗಳನ್ನು ಅರಿತುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯ ತೋರದೆ ನಿಯಮ ಪಾಲನೆ ಮಾಡಬೇಕು. ಬೈಕ್ ಸವಾರರು ಹೆಲ್ಮೆಟ್ ಧರಿಸಬೇಕು. ಸಂಚಾರ ನಿಯಮ ಪಾಲಿಸದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.
ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಸರಿಯಾದ ಉತ್ತರ ಹೇಳಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಎಸ್ಪಿ ಲಂಗೋಟಿ, ಜ್ಞಾನಸುಧಾ ವಿದ್ಯಾಲಯದ ಮಕ್ಕಳು ಜಾಣರು. ಸಾಮಾನ್ಯ ಜ್ಞಾನ ಅತ್ಯುತ್ತವಾಗಿದೆ ಎಂದರು.
ವಿದ್ಯಾಲಯದ ನಿರ್ದೇಶಕ ಡಾ.ಮುನೇಶ್ವರ ಲಾಖಾ ಮಾತನಾಡಿ, ರಸ್ತೆ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ವಿದ್ಯಾರ್ಥಿಗಳು ಪಾಲಕರಿಗೆ ತಿಳಿಹೇಳಿ ಮನಸ್ಥಿತಿ ಬದಲಾಯಿಸಬೇಕು. ಸಂಚಾರ ನಿಯಮ ಉಲ್ಲಂಘನೆ ಮಾಡಿದಾಗ ಪೊಲೀಸರು ದಂಡ ವಿಧಿಸುತ್ತಾರೆ. ಹೀಗಾಗಿ ನಿಯಮ ಉಲ್ಲಂಘನೆ ಮಾಡದಂತೆ ಮನೆಯವರಿಗೆ ಹೇಳಬೇಕು ಎಂದರು.
ಪದವಿಪೂರ್ವ ಕಾಲೇಜು ಪ್ರಾಚಾರ್ಯ ಚನ್ನವೀರ ಪಾಟೀಲ್, ವಿದ್ಯಾಲಯ ಪ್ರಾಚಾರ್ಯೆ ಸುನೀತಾ ಸ್ವಾಮಿ ಉಪಸ್ಥಿತರಿದ್ದರು.

ಮಕ್ಕಳ ಕೈಗೆ ಬೈಕ್ ನೀಡಿದರೆ ಜೈಲು
ಅಪ್ರಾಪ್ತ ವಯಸ್ಸಿನ ಮಕ್ಕಳು ಬೈಕ್ ಚಲಾಯಿಸಿದರೆ ಅವರ ಪಾಲಕರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ. ಹೀಗಾಗಿ 18 ವರ್ಷದ ನಂತರ ವಿದ್ಯಾರ್ಥಿಗಳು ಚಾಲನಾ ಪರವಾನಗಿ ಪತ್ರ ಪಡೆಯುವವರೆಗೂ ವಾಹನ ಚಲಾಯಿಸಬಾರದು ಎಂದು ಎಸ್ಪಿ ಚನ್ನಬಸವಣ್ಣ ಲಂಗೋಟಿ ಕಿವಿಮಾತು ಹೇಳಿದರು. ಕಾನೂನು ಪ್ರಕಾರ 18 ವರ್ಷದೊಳಗಿನವರಿಗೆ ವಾಹನ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್) ನೀಡುವ ಅವಕಾಶವಿಲ್ಲ. ಅಪ್ರಾಪ್ತರ ಕೈಗೆ ಬೈಕ್ ನೀಡಬಾರದು. ಒಂದು ವೇಳೆ ವಾಹನ ಚಲಾಯಿಸಿದರೆ ಪಾಲಕರು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.