ಹುಲಿಯೂರುದುರ್ಗ: ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜ್ಯ ಹೆದ್ದಾರಿ&33ರ ರಾಜೇಂದ್ರಪುರ ಗೇಟ್ ಸಮೀಪ ಟಯರ್ ಸ್ಫೋಟಗೊಂಡ ಕಾರು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಡಿಕ್ಕಿಹೊಡೆದು, ರಸ್ತೆ ಬದಿಗೆ ಪಲ್ಟಿಯಾಗಿ ಮರಕ್ಕೆ ಗುದ್ದಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟರೆ ಮೂವರು ಗಂಭೀರ ಗಾಯಗೊಂಡಿದ್ದಾರೆ.
ಮಂಡ್ಯದ ಚಾಮರಾಜನಗರ ನಿವಾಸಿ ಆಕರ್ಶ್(28) ಮೃತ. ಶಶಾಂಕ್ ಗೌಡ, ಜ್ಞಾನೇಶ್ವರಿ, ಶಶಾಂಕ್ ಗಂಭೀರ ಗಾಯಗೊಂಡವರು.
ಮೂಲತ ಮಂಡ್ಯದರಾದ ಆಕರ್ಶ್, ಶಶಾಂಕ್ ಗೌಡ, ಜ್ಞಾನೇಶ್ವರಿ, ಶಶಾಂಕ್ ತುಮಕೂರಿನಲ್ಲಿ ಸಂಬಂಧಿಕರ ಮದುವೆ ಮುಗಿಸಿಕೊಂಡು ವಾಪಸ್ಸಾಗುವ ವೇಳೆ ಕುಣಿಗಲ್ ತಾಲೂಕಿನ ರಾಜೇಂದ್ರಪುರ ಗೇಟ್ ಸಮೀಪದ ರಾಜ್ಯ ಹೆದ್ದಾರಿ&33ರಲ್ಲಿ ಕಾರಿನ ಟಯರ್ ಸ್ಫೋಟಗೊಂಡು ಕಾರು ಚಾಲಕನ ನಿಯಂತ್ರಣ ತಪ್ಪಿ, ಡಿವೈಡರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಪಕ್ಕದ ಮರಕ್ಕೂ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಗಂಭೀರ ಗಾಯಗೊಂಡಿರುವ ಶಶಾಂಕ್ಗೌಡ ಹಾಗೂ ಜ್ಞಾನೇಶ್ವರಿ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು.
ಗಾಯಾಳುಗಳನ್ನು ಹುಲಿಯೂರುದುರ್ಗ ಹಾಗೂ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಆದಿ ಚುಂಚನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕರ್ಶ್ ಮೃತದೇಹವನ್ನು ಕುಣಿಗಲ್ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಅಫಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು,ಸ್ಥಳಕ್ಕೆ ಅಮೃತೂರು ಸಿಪಿಐ ಮಾಧ್ಯನಾಯಕ್ ಹಾಗೂ ಹುಲಿಯೂರುದುರ್ಗ ಪಿಎಸ್ಐ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.