ಬೀರೂರು ಸಮೀಪದ ಕುಡ್ಲೂರು ಗೇಟ್ ಬಳಿ ಸಂಭವಿಸಿದ ಅಪಘಾತದಲ್ಲಿ ಕ್ಯಾಂಟರ್ ನಜ್ಜುಗುಜ್ಜಾಗಿರುವುದು. 
ಜಿಲ್ಲೆ

ಅಪಘಾತದಲ್ಲಿ ಇಬ್ಬರು ಸಾವು

ಬೀರೂರು: ಪಟ್ಟಣ ಸಮೀಪದ ಕುಡ್ಲೂರು ಗೇಟ್ ಬಳಿ ಸೋಮವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಮತ್ತು ಕ್ಯಾಂಟರ್ ಮುಖಾಮುಖಿ ಡಿಕ್ಕಿಹೊಡೆದುಕೊಂಡು ಕ್ಯಾಂಟರ್ ಚಾಲಕ ಮತ್ತು ಸಹ ಪ್ರಯಾಣಿಕ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ.

ಕ್ಯಾಂಟರ್ ಚಾಲಕ ಧಾರವಾಡದ ಮಹಮದ್ ಅಶ್ರ್ ಮೆಟಗಾರ್(50) ಮತ್ತು ಹುಬ್ಬಳ್ಳಿಯ ಮೋಹನ್ ಮೃತಪಟ್ಟವರು. ಬಸ್ ಚಾಲಕ ಸಂಭಾಜಿ ಮತ್ತು ಕಂಡಕ್ಟರ್ ವೆಂಕೋಬ ಕಾತರಕಿ ಸೇರಿ ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಧರ್ಮಸ್ಥಳದಿಂದ ಸಂಡೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಮತ್ತು ಭದ್ರಾವತಿಯಲ್ಲಿ ಕಾರ್ಯಕ್ರಮ ಮುಗಿಸಿಕೊಂಡು ಸೌಂಡ್‌ಸಿಸ್ಟಮ್ ಸಲಕರಣೆಗಳನ್ನು ಹೊತ್ತು ಮೈಸೂರಿಗೆ ತೆರಳುತ್ತಿದ್ದ ಕ್ಯಾಂಟರ್ ರಾಷ್ಟ್ರೀಯ ಹೆದ್ದಾರಿ 206ರ ಕುಡ್ಲೂರು ಗೇಟ್ ಬಳಿ ಮುಖಾಮುಖಿ ಡಿಕ್ಕಿ ಹೊಡೆದುಕೊಂಡಿವೆ. ಅಪಘಾತದ ರಭಸಕ್ಕೆ ಕ್ಯಾಂಟರ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.