ಜಿಲ್ಲೆ

ಅಪಘಾತದಲ್ಲಿ ಇಬ್ಬರು ಯುವಕರ ಸಾವು

ಹಾಸನ: ಹುಟ್ಟುಹಬ್ಬದ ಹಿನ್ನಲೆಯಲ್ಲಿ ಕೇಕ್ ಕತ್ತರಿಸಿ ನಂತರ ಸ್ನೇಹಿತರ ಜತೆ ಕಾರಿನಲ್ಲಿ ಜಾಲಿ ರೈಡ್ ಹೋದ ವೇಳೆ ತಾಲೂಕಿನ ಮಡೆನೂರು ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ.
ಚನ್ನರಾಯಪಟ್ಟಣದ ರಕ್ಷಿತ್ (22), ಕುಶಾಲ್ (24) ಮೃತ ಯುವಕರು. ಅಭಿಷೇಕ್, ನಿಶಾಂತ್, ಮಂಜುನಾಥ್ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ಮಡೆನೂರು ಫ್ಲೈಓವರ್ ಮೇಲೆ ರಕ್ಷಿತ್ ಬರ್ತಡೇ ಸೆಲೆಬ್ರೇಷನ್ ಮಾಡಿದ ಗೆಳೆಯರು, ಕಾರಿನಲ್ಲಿ ಹಾಸನದ ಕಡೆಗೆ ಜಾಲಿ ರೈಡ್ ಬರುತ್ತಿದ್ದರು.
ಅತಿ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ರಸ್ತೆ ಬದಿಯ ಜಮೀನಿಗೆ ಹಾರಿ ಬಿದ್ದಿದೆ. ಕಾರಿನ ಒಳಗೆ ಸಿಲುಕಿಕೊಂಡ ಎಲ್ಲರೂ ತೀವ್ರವಾಗಿ ಗಾಯಗೊಂಡರು. ಈ ಪೈಕಿ ರಕ್ಷಿತ್ ಸ್ಥಳದಲ್ಲೇ ಕೊನೆಯುಸಿರೆಳೆದರೆ, ಕುಶಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಗಿರೀಶ್ ಎಂಬವರಿಗೆ ಸೇರಿದ ಕಾರನ್ನು ಬರ್ತಡೇ ಸೆಲೆಬ್ರೇಷನ್‌ಗೆಂದು ಕುಶಾಲ್ ಪಡೆದುಕೊಂಡು ಬಂದಿದ್ದ ಎನ್ನಲಾಗಿದೆ. ಡಿಕ್ಕಿ ಹಾಗೂ ಪಲ್ಟಿಯಾದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಶಾಂತಿಗ್ರಾಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.