ಜಿಲ್ಲೆ

ಅಪಘಾತದಲ್ಲಿ ಅಣ್ಣ-ತಮ್ಮ ಸಾವು

ಅಥಣಿ ಗ್ರಾಮೀಣ: ಕಾರು ಮತ್ತು ಬೈಕ್ ನಡುವಿನ ಅಪಘಾತದಲ್ಲಿ ಇಬ್ಬರು ಸಹೋದರರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿರುವ ಘಟನೆ ಅಥಣಿ ತಾಲೂಕಿನ ಸತ್ತಿ ಹೊರವಲಯದ ಅಥಣಿ-ಜಮಖಂಡಿ ರಸ್ತೆ ಮೇಲೆ ಶನಿವಾರ ರಾತ್ರಿ ಸಂಭವಿಸಿದೆ.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿ-ರಬಕವಿ ತಾಲೂಕಿನ ಆಸಂಗಿ ಗ್ರಾಮದ ರಮಜಾನಸಾಬ್ ಬಾಪುಸಾಬ್ ಸನದಿ (28), ರಾಜಾಸಾಬ್ ಬಾಪುಸಾಬ್ ಸನದಿ (20) ಮೃತ ಸಹೋದರರು. ಬೈಕ್ ಹಿಂಬದಿ ಸವಾರ ಅಥಣಿ ತಾಲೂಕಿನ ಜನವಾಡ ಗ್ರಾಮದ ಇಸಾಕ್ ಇಮಾಮಸಾಬ್ ಪಟೇಲ (35) ಹಾಗೂ ಕಾರು ಚಾಲಕ ಮುಜಾವರ ಗಾಯಗೊಂಡಿದ್ದು, ಅಥಣಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸನದಿ ಹಾಗೂ ಪಟೇಲ ಸಹೋದರರು ಗಾರೆ ಕೆಲಸ ಮುಗಿಸಿಕೊಂಡು ಜನವಾಡಕ್ಕೆ ಬೈಕ್ ಮೇಲೆ ಹೋಗುತ್ತಿರುವಾಗ ಅಪಘಾತವಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಅಥಣಿ ಠಾಣೆ ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಅಥಣಿ ಸಿಪಿಐ ಸಂತೋಷ ಹಳ್ಳೂರ, ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.