ಚಿತ್ರದುರ್ಗ: ಅಪಘಾತದಿಂದ ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದ ಮಹಿಳೆಗೆ ಜಿಲ್ಲಾ ನ್ಯಾಯಾಲಯದ ವಿಶೇಷ ಲೋಕ ಅದಾಲತ್‌ನ ರಾಜೀ ಸಂಧಾನದ ಮೂಲಕ ಶುಕ್ರವಾರ 7.51 ಲಕ್ಷ ರೂ. ಪರಿಹಾರ ಲಭಿಸಿದೆ.
ಘಟನೆ ಹಿನ್ನೆಲೆ: ಶಿವಮೊಗ್ಗ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದಲ್ಲಿ 2018ರ ಸೆ. 12ರಂದು ಚಾಲಕನ ಅಜಾಗರೂಕತೆಯಿಂದಾಗಿ ಚಿತ್ರದುರ್ಗ ತಾಲೂಕಿನ ಬೊಗಳೇರಹಟ್ಟಿ ರಂಗಮ್ಮ ಎಡ ಪಾದವನ್ನು ಕಳೆದುಕೊಂಡು ಅಂಗವೈಕ್ಯಲ್ಯಕ್ಕೆ ಒಳಗಾಗಿದ್ದರು.
ಪ್ರಕರಣ ಸಂಬಂಧ ರಂಗಮ್ಮ ಚಿತ್ರದುರ್ಗ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಲಯ ಮಹಿಳೆಗೆ 2ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿತ್ತು.
ಈ ಆದೇಶ ಪ್ರಶ್ನಿಸಿ ರಂಗಮ್ಮ ಹೈಕೋರ್ಟ್‌ನಲ್ಲಿ ಪರಿಹಾರ ಮೊತ್ತ ಹೆಚ್ಚಿಸಲು ಮೇಲ್ಮನವಿ ಸಲ್ಲಿಸಿದ್ದರು. 4.51 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್ ಆದೇಶಿಸಿತ್ತು. ಪರಿಹಾರ ಮೊತ್ತ ಕಡಿಮೆಯಾಯಿತೆಂದು ಸುಪ್ರೀಂ ಕೋರ್ಟ್‌ಗೆ ಪುನಾಃ ಮೇಲ್ಮನವಿ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ಜು. 29ರಿಂದ ಆ. 3ರ ವರೆಗೆ ನಡೆಯಲಿರುವ ವಿಶೇಷ ಲೋಕ ಅದಾಲತ್‌ನಲ್ಲಿ ಪ್ರಕರಣ ಇತ್ಯರ್ಥಗೊಳಿಸಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿತ್ತು.
ಅದರಂತೆ ಪ್ರಾಧಿಕಾರದ ಅಧ್ಯಕ್ಷ, ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ್ ಅವರು ನ್ಯಾಯಾಲಯಕ್ಕೆ ಕರೆಸಿದ್ದು, ರಂಗಮ್ಮ ಅವರಿಗೆ 4.51 ಲಕ್ಷ ರೂ. ಜೊತೆಗೆ ಹೆಚ್ಚುವರಿಯಾಗಿ 3ಲಕ್ಷ ರೂ. ಪರಿಹಾರ ನೀಡಲು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.
ಕೆಎಸ್‌ಆರ್‌ಟಿಸಿ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಇ.ಶ್ರೀನಿವಾಸ್‌ಮೂರ್ತಿ, ರಂಗಮ್ಮ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ವಿಜಯ್ ಇತರರಿದ್ದರು.