ಜಿಲ್ಲೆ

ಅಪಘಾತ ನಿಯಂತ್ರಿಸಲು ನಿಯಮ ಪಾಲಿಸಿ

ಚಿತ್ರದುರ್ಗ: ವಾಹನ ಸವಾರರೆಲ್ಲರೂ ಸಂಚಾರ ನಿಯಮಗಳನ್ನು ತಪ್ಪದೇ ಪಾಲಿಸಿದಲ್ಲಿ ಅಪಘಾತ ನಿಯಂತ್ರಿಸಬಹುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ ಕಾಳಿಸಿಂಗ್ ಸಲಹೆ ನೀಡಿದರು.

ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನೆಹರು ಯುವಕೇಂದ್ರ, ಕಾಲೇಜು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ಪ್ರಾದೇಶಿಕ ಸಾರಿಗೆ ಕಚೇರಿ, ನೀಲಕಂಠ ಮೆಮೋರಿಯಲ್ ಪ್ಯಾರಾ ಮೆಡಿಕಲ್ ಕಾಲೇಜಿನಿಂದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಂಚಾರಿ ನಿಯಮ, ಮಾಹಿತಿ ಚಿಹ್ನೆಗಳು, ಅಪಘಾತ ವೇಳೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳ ಕುರಿತು ತಿಳಿದಿರಬೇಕು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅಲ್ಲದೆ, ಮೊಬೈಲ್‌ನಲ್ಲಿ ಮಾತನಾಡುತ್ತ ಚಾಲನೆ ಮಾಡಬಾರದು. ಸುರಕ್ಷತಾ ಕ್ರಮ ತಪ್ಪದೇ ಪಾಲಿಸಿ ಪ್ರಾಣ ರಕ್ಷಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಸ್.ವಿ.ರವಿಶಂಕರ್ ಮಾತನಾಡಿ, 18 ವರ್ಷದೊಳಗಿನ ವಿದ್ಯಾರ್ಥಿಗಳು ವಾಹನ ಚಾಲನೆ ಮಾಡಬಾರದು. ಶಿಸ್ತಿನ ಜೊತೆ ಸಂಸ್ಕಾರ ಮೈಗೂಡಿಸಿಕೊಂಡು ದೇಶ ಮತ್ತು ಸಮಾಜಕ್ಕೆ ಸತ್ಪ್ರಜೆಗಳಾಗಿ ಎಂದು ಸಲಹೆ ನೀಡಿದರು.

ಕೇಂದ್ರದ ಯುವಜನ ಅಧಿಕಾರಿ ಸುಹಾಸ್, ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಮಜಹರ್ ಉಲ್ಲಾ, ಅಮೃತ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ವಜಾಹತ್ ಉಲ್ಲಾ, ಪ್ರಾದೇಶಿಕ ಕಚೇರಿ ವಾಹನ ನಿರೀಕ್ಷಕರಾದ ರಾಜೇಶ್, ಉಪನ್ಯಾಸಕರಾದ ರಾಜೇಶ್ ಕುಮಾರ್, ಗಂಗಾಧರ್, ಲತಾ, ಪ್ರತಿಮಾ, ಸವಿತಾ, ವಾಣಿ, ರಘು ಇತರರಿದ್ದರು.