ಮುಂಡಗೋಡ ಇತ್ತೀಚೆಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳ ಕಾರಣಗಳಿಂದ ಅಪಘಾತಗಳು ಹೆಚ್ಚಾಗುತ್ತಿದೆ. ಈ ಕಾರಣದಿಂದ ಇಲ್ಲಿನ ಪೊಲೀಸರು ಬಿಡಾಡಿ ದನಗಳ ಕೋಡುಗಳಿಗೆ ರಿಫ್ಲೆಕ್ಟರ್(ರೇಡಿಯಂ ಪಟ್ಟಿ)ಗಳನ್ನು ಅಂಟಿಸುತ್ತಿದ್ದಾರೆ.
ರಾತ್ರಿ ವೇಳೆಯಲ್ಲಿ ಬಡಾವಣೆ ಮತ್ತು ಮುಖ್ಯ ರಸ್ತೆಗಳ ಮೇಲೆಯೇ ದನಗಳು ಮಲಗುವುದರಿಂದ ಬೈಕ್ ಸವಾರರು ಮತ್ತು ವಾಹನ ಚಾಲಕರಿಗೆ ಸಂಚಾರಕ್ಕೆ ಅಡೆ-ತಡೆ ಉಂಟಾಗುತ್ತಿದೆ. ಅಲ್ಲದೆ, ಅಪಘಾತಗಳು ಸಂಭವಿಸಿ ಸಾವು-ನೋವು ಸಂಭವಿಸಿದೆ. ಇದನ್ನು ತಪ್ಪಿಸಲು ಇಲ್ಲಿನ ಸಿಪಿಐ ಪ್ರಭುಗೌಡ ಡಿ.ಕೆ. ನಿರ್ದೇಶನದಂತೆ ಪಿಎಸ್ಐ ಬಸವರಾಜ ಮಬನೂರ ಮತ್ತು ಸಿಬ್ಬಂದಿ ಬಿಡಾಡಿ ದನಗಳ ಕೋಡುಗಳಿಗೆ ರಿಫ್ಲೆಕ್ಟರ್(ರೇಡಿಯಂ ಪಟ್ಟಿ)ಗಳನ್ನು ಅಂಟಿಸಿದ್ದಾರೆ.
ದಾಂಡೇಲಿ ನಗರದಲ್ಲೂ ಜಾನುವಾರುಗಳ ಕೋಡುಗಳಿಗೆ ರೇಡಿಯಂ ಸ್ಟೀಕರ್ ಅಂಟಿಸಲಾಗಿದೆ. ಸಿಪಿಐ ಪ್ರಭು ಗಂಗನಹಳ್ಳಿ, ಪಿಎಸ್ಐ ಯಲ್ಲಪ್ಪ ಎಸ್., ಪೊಲೀಸ್ ಸಿಬ್ಬಂದಿ ನಾಗರಾಜ ಇತರರು ಈ ಕಾರ್ಯದಲ್ಲಿ ಭಾಗವಹಿಸಿದ್ದರು.
ಕುಮಟಾ ಪಟ್ಟಣದಲ್ಲೂ ಸೋಮವಾರ ಹೆದ್ದಾರಿ ಹಾಗೂ ಒಳರಸ್ತೆಗಳಲ್ಲಿ ಅಪಘಾತಗಳಿಗೆ ಕಾರಣವಾಗುತ್ತಿರುವ ಬಿಡಾಡಿ ದನಗಳ ಕೊರಳಿಗೆ ಪಿಎಸ್ಐ ರವಿ ಗುಡ್ಡಿ ಹಾಗೂ ಸಿಬ್ಬಂದಿ ರಿಫ್ಲೆಕ್ಟರ್ಗಳನ್ನು ಅಳವಡಿಸಿದರು.