ಜಿಲ್ಲೆ

ಅಪಘಾತ ತಡೆಗೆ ಜಾಗ್ರತೆ ವಹಿಸಿ

ಮದ್ದೂರು: ವಿದ್ಯಾರ್ಥಿಗಳು ವಿವೇಚನಾಶೀಲರಾಗಿ ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿ ಪಡೆದು ಅಪಘಾತ ತಡೆಗೆ ಜಾಗ್ರತೆ ವಹಿಸಬೇಕು ಎಂದು ಸಂಚಾರ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಅಯ್ಯನಗೌಡ ಹೇಳಿದರು.


ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಮದ್ದೂರು ಸಂಚಾರ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.


ಅತಿವೇಗ, ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದ ಸಾವಿರಾರು ಅಪಘಾತಗಳು ಸಂಭವಿಸುತ್ತಿದು,್ದ ಪಾದಚಾರಿ ಸೇರಿದಂತೆ ಪ್ರತಿಯೊಬ್ಬರು ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದರೆ ಅಪಘಾತಗಳನ್ನು ತಡೆಗಟ್ಟಬಹುದು ಎಂದು ತಿಳಿಸಿದರು.


ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಧೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಸ್ತೆ ಸುರಕ್ಷತೆ ಕುರಿತು ವಿದೇಶದಲ್ಲಿ ಪಠ್ಯದಲ್ಲಿ ಪಾಠ ಇರುವಂತೆ ರಾಜ್ಯದಲ್ಲೂ ಅಳವಡಿಸಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.


ಪ್ರಾಂಶುಪಾಲರಾದ ಜಿ.ಎಸ್.ಶಂಕರೇಗೌಡ, ಯು.ಎಸ್.ಶಿವಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿ ಎಚ್.ಎಸ್. ಪಂಚಲಿಂಗೇಗೌಡ, ಉಪನ್ಯಾಸಕರಾದ ಜಿ.ಸುರೇಂದ್ರ, ರೇವಣ್ಣ, ಪ್ರೇಮಕುಮಾರಿ, ಜಯವರ್ಧನ್, ನಂದಿನಿ, ಮೋಹನ್, ಕೌಶಲ್ಯಾ, ಶ್ರುತಿ, ಲೀಲಾವತಿ ಇತರರು ಹಾಜರಿದ್ದರು.