ಜಿಲ್ಲೆ

ಅನ್​ಲಾಕ್​ಗೆ ಸಜ್ಜಾಗುತ್ತಿದೆ ಜಿಲ್ಲೆ

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆಯ ಅಬ್ಬರಕ್ಕೆ ಕೊಂಚ ಕಡಿವಾಣ ಬಿದ್ದಿದೆ. ಹಾಗಾಗಿ, ರಾಜ್ಯ ಸರ್ಕಾರ ಲಾಕ್​ಡೌನ್ ಮುಂದುವರಿಸಿ ಘೋಷಿಸಿರುವ 11 ಜಿಲ್ಲೆಗಳ ಪಟ್ಟಿಯಲ್ಲಿ ಧಾರವಾಡ ಇಲ್ಲ, ಜೂ. 14ರವರೆಗೆ ಲಾಕ್​ಡೌನ್ ಯಥಾಸ್ಥಿತಿ ಮುಂದುವರಿಯಲಿದೆ. ನಂತರದ ದಿನಗಳಲ್ಲಿ ಕೆಲ ನಿರ್ಬಂಧಗಳಲ್ಲಿ ಸಡಿಲಿಕೆಯಾಗಿ ಸೆಮಿ ಲಾಕ್​ಡೌನ್ ಜಾರಿಯಾಗುವುದು ಬಹುತೇಕ ನಿಶ್ಚಿತವಾಗಿದೆ. ಕರೊನಾ ಪಾಸಿಟಿವಿಟಿ ದರ ಈಗ ಶೇ. 5ಕ್ಕಿಂತ ಕಡಿಮೆ ಆಗಿದ್ದು, ಅನ್​ಲಾಕ್​ಗೆ ಜಿಲ್ಲೆ ಸಜ್ಜಾಗುತ್ತಿದೆ.

ಕೋವಿಡ್ 2ನೇ ಅಲೆ ಆರಂಭವಾದಾಗ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 900 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದವು. ಲಾಕ್​ಡೌನ್ ಜಾರಿಯಾದ ನಂತರ ಜನದಟ್ಟಣೆಗೆ ನಿರ್ಬಂಧ ವಿಧಿಸಿದ ಪರಿಣಾಮ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಮುಖವಾಗುತ್ತ ಸಾಗಿದೆ.

ಕಾಳಜಿ ಕೇಂದ್ರಗಳ ಸ್ಥಾಪನೆ: ಲಾಕ್​ಡೌನ್​ಗಿಂತ ಮೊದಲು ಹುಬ್ಬಳ್ಳಿ- ಧಾರವಾಡ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಜನದಟ್ಟಣೆಗೆ ನಿಯಂತ್ರಣ ಇರಲಿಲ್ಲ. ಹೀಗಾಗಿ 2ನೇ ಅಲೆ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿತು. ಕೆಲ ದೊಡ್ಡ ಗ್ರಾಮಗಳಲ್ಲಿ 50ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾದವು. ಗ್ರಾಮೀಣ ಪ್ರದೇಶದಲ್ಲಿ ಸೋಂಕಿತರು ಮನೆಯಲ್ಲಿ ಕ್ವಾರಂಟೈನ್ ಆದರೂ ಪರಸ್ಪರ ಅಂತರ ಸಾಧ್ಯವಾಗುತ್ತಿರಲಿಲ್ಲ. ಗ್ರಾಮೀಣ ಜನತೆ ಅಂತರ ಕಾಪಾಡುವಿಕೆಯನ್ನು ಗಂಭೀರವಾಗಿ ಪರಿಗಣಿಸದ ಕಾರಣ ಕರೊನಾ ತೀವ್ರವಾಗಿ ಹರಡಿತು. ಗ್ರಾಮೀಣ ಪ್ರದೇಶದಲ್ಲೂ ಕೋವಿಡ್ ಕಾಳಜಿ ಕೇಂದ್ರ (ಸಿಸಿಸಿ) ಸ್ಥಾಪನೆಗೆ ಜಿಲ್ಲಾಡಳಿತ ಮುಂದಾಯಿತು. ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ತಾಲೂಕು ಆಡಳಿತ ದೊಡ್ಡ ಗ್ರಾಮಗಳಲ್ಲಿ, ಗ್ರಾ.ಪಂ. ಇರುವಲ್ಲಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿತು. ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಸೋಂಕಿತರನ್ನು ಕಾಳಜಿ ಕೇಂದ್ರಗಳಿಗೆ ದಾಖಲಿಸಲಾಯಿತು. ಅಲ್ಲಿ ಆಶಾ, ಅಂಗನವಾಡಿ ಹಾಗೂ ಗ್ರಾ.ಪಂ. ಸಿಬ್ಬಂದಿಯಿಂದ ಊಟ- ಔಷಧೋಪಚಾರ ವ್ಯವಸ್ಥೆ ಕಲ್ಪಿಸಲಾಯಿತು. ಇದರಿಂದಾಗಿ ಗ್ರಾಮಗಳಲ್ಲಿ ಸೋಂಕಿತರಿಂದ ಸೋಂಕು ಹರಡುವಿಕೆಗೆ ಕಡಿವಾಣ ಹಾಕಿದ್ದರಿಂದ ಹೊಸ ಪ್ರಕರಣಗಳ ಸಂಖ್ಯೆ ಇಳಿಮುಖವಾಯಿತು.

ಮೊಬೈಲ್ ಟೆಸ್ಟಿಂಗ್ ಹೆಚ್ಚಳ: 2ನೇ ಅಲೆ ಆರಂಭವಾದಾಗ ಗ್ರಾಮಗಳಲ್ಲಿ ಕರೊನಾ ತಪಾಸಣೆಗೊಳಗಾದವರಿಗೆಲ್ಲ ಪಾಸಿಟಿವ್ ಬರುತ್ತಿದೆ ಎಂಬ ಗುಲ್ಲೆದ್ದಿತ್ತು. ಹೀಗಾಗಿ, ಕರೊನಾ ಟೆಸ್ಟಿಂಗ್ ತೀವ್ರ ಕಡಿಮೆಯಾಗಿತ್ತು. ಗ್ರಾ.ಪಂ., ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಪ್ರತಿ ಗ್ರಾಮಗಳಿಗೆ ಸಂಚಾರಿ ವಾಹನ ಕಳುಹಿಸಿ ಕರೊನಾ ಟೆಸ್ಟಿಂಗ್ ಮಾಡಿಸಲಾಯಿತು. ಪಾಸಿಟಿವ್ ಬಂದವರನ್ನು ಕಾಳಜಿ ಕೇಂದ್ರಗಳಿಗೆ ದಾಖಲಿಸಿ ಚಿಕಿತ್ಸೆ ನೀಡಿದ ಪರಿಣಾಮ ಸೋಂಕು ಹರಡುವಿಕೆಗೆ ಕಡಿವಾಣ ಬಿದ್ದಿದೆ.

ಹುಬ್ಬಳ್ಳಿ ಹೆಚ್ಚು, ಕುಂದಗೋಳ ಕಡಿಮೆ

ಜಿಲ್ಲೆಯ ಕರೊನಾ ಪಾಸಿಟಿವಿಟಿ ದರ ಆರಂಭದಲ್ಲಿ ಶೇ. 18-20 ಇತ್ತು. ಹಾಗಾಗಿ ಲಾಕ್​ಡೌನ್ ಜಾರಿಯಾಗಿತ್ತು. ರಾಜ್ಯ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಕಠಿಣ ನಿರ್ಬಂಧ, ಅನಗತ್ಯ ಜನಸಂಚಾರಕ್ಕೆ ಕಡಿವಾಣ, ಮದುವೆ, ಜಾತ್ರೆಗಳ ರದ್ದತಿಗೆ ಕಠಿಣ ಕ್ರಮ ಜರುಗಿಸಿತು. ಪರಿಣಾಮ ಜೂ. 10ರ ವರದಿಯಂತೆ ಜಿಲ್ಲೆಯ ಪಾಸಿಟಿವಿಟಿ ದರ ಶೇ. 4.9ಕ್ಕೆ ಇಳಿದಿದೆ. ಧಾರವಾಡ ತಾಲೂಕಿನಲ್ಲಿ ಶೇ. 3.94, ಕಲಘಟಗಿ ಶೇ. 1.46, ಹುಬ್ಬಳ್ಳಿ ಶೇ. 5.19, ನವಲಗುಂದ ಶೇ. 2.46, ಕುಂದಗೋಳದಲ್ಲಿ ಶೇ. 1.09 ಪಾಸಿಟಿವಿಟಿ ದರ ವರದಿಯಾಗಿದೆ. 2ನೇ ಅಲೆ ಆರಂಭದಲ್ಲಿ ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ ಕೋವಿಡ್ ಪ್ರಕರಣಗಳ ಸಂಖ್ಯೆ 900 ಪತ್ತೆಯಾಗುತ್ತಿದ್ದವು. ಜೂ. 10ರಂದು 261 ಪಾಸಿಟಿವ್ ಪ್ರಕರಣ ವರದಿಯಾಗಿದ್ದು, 2,648 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ 1,042 ಜನ ಕೋವಿಡ್​ನಿಂದ ಮೃತಪಟ್ಟಿದ್ದಾರೆ.

ರಾಜ್ಯದ 21 ಜಿಲ್ಲೆಗಳಲ್ಲಿ ಜೂ. 21ರವರೆಗೆ ಲಾಕ್​ಡೌನ್ ನಿರ್ಬಂಧ ಮುಂದುವರಿದಿದೆ. ಆದರೆ, ಧಾರವಾಡ ಜಿಲ್ಲೆಯ ಪಾಸಿಟಿವಿಟಿ ದರ ಇಳಿಮುಖವಾಗಿರುವುದರಿಂದ ಜೂ. 14ರ ಬೆಳಗ್ಗೆ 6ರವರೆಗೆ ಯಥಾಸ್ಥಿತಿ ಮುಂದುವರಿಯಲಿದೆ. ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ರ್ಚಚಿಸಿ ಮುಂದಿನ ಕ್ರಮ ಜರುಗಿಸಲಾಗುವುದು.| ನಿತೇಶ ಪಾಟೀಲ ಜಿಲ್ಲಾಧಿಕಾರಿ