ರಾಮನಗರ : ಸಾಹಿತ್ಯವು ಸಾಮಾಜಿಕ ಒಡನಾಟದಿಂದ ರೂಪುಗೊಂಡಷ್ಟೂ ಅದರ ಸತ್ವ ಸಮಕಾಲೀನವಾಗಿರುತ್ತದೆ ಎಂದು ಲೇಖಕ ಹಾಗೂ ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ತಾಲೂಕಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಬಂಜಗೆರೆ ಜಯಪ್ರಕಾಶ್ ಬಳಗ ಮಂಗಳವಾರ ಹಮ್ಮಿಕೊಂಡಿದ್ದ ‘ಜನಪರ ಜೇಪಿ - 60 ಹಾಗೂ ಬಂಜಗೆರೆ ಕುರಿತ ಗಂಧಕುಟಿ ವೆಬ್‌ಸೈಟ್ ಅನಾವರಣ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸುಂದರ ಸಾಹಿತ್ಯ ಬರೆಯುವುದಕ್ಕಾಗಿ ಸಾಹಿತಿಗಳು ದಂತಗೋಪುರದಲ್ಲಿ ಇರಬೇಕೆನ್ನುವ ಭ್ರಮೆ ಬೇಡ. ಲೇಖಕ ಸಾಮಾಜಿಕವಾಗಿ ಕ್ರಿಯಾಶೀಲನಾಗಿದ್ದರೆ ಮಾತ್ರ ಆತನಿಂದ ಸತ್ವಯುತ ಸಾಹಿತ್ಯ ಬರಲು ಸಾಧ್ಯ ಎಂದರು.
ಸಾರ್ವಕಾಲಿಕ ಮಾನ್ಯತೆ ಪಡೆದಿರುವ ಬಹುಪಾಲು ಲೇಖಕ-ಲೇಖಕಿಯರು ಸಾಮಾಜಿಕ ಕ್ರಿಯಾಶೀಲತೆ ಮತ್ತು ಸಾಹಿತ್ಯದ ಕ್ರಿಯಾಶೀಲತೆ ಎರಡನ್ನೂ ಹೊಂದಿದವರೇ ಆಗಿದ್ದಾರೆ. ಡಾ. ಬಿ.ಆರ್. ಅಂಬೇಡ್ಕರ್ ಅವರಿಂದ ಹಿಡಿದು ಮಹಾ ಶ್ವೇತಾದೇವಿ, ಅರುಂಧತಿ ರಾಯ್, ಬಾನು ಮುಷ್ತಾಕ್ ಸೇರಿ ಹಲವರು ಕೇವಲ ಸಾಹಿತ್ಯ ಕ್ರಿಯೆಯ ಮೂಲಕ ದೊಡ್ಡವರಾದವರಲ್ಲ ಎಂದು ಹೇಳಿದರು.
ಬುಕರ್ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿರುವ ಬಾನು ಮುಷ್ತಾಕ್ ಅವರು ಕನ್ನಡದ ಒಳ್ಳೆಯ ಕಥೆಗಾರ್ತಿ ಮಾತ್ರವಲ್ಲ, ಮಹಿಳಾ ಚಳವಳಿಯ ಭಾಗವಾಗಿ ಮತ್ತು ಪತ್ರಕರ್ತರಾಗಿ ಅನ್ಯಾಯದ ವಿರುದ್ಧ ದನಿ ಎತ್ತಿದವರು. ಒಂದೆಡೆ ಇಸ್ಲಾಂ ಧರ್ಮದ ಮೂಲಭೂತವಾದಿಗಳೊಂದಿಗೆ, ಮತ್ತೊಂದೆಡೆ ಹಿಂದು ಧರ್ಮದ ಸನಾತನವಾದಿಗಳೊಂದಿಗೆ ಸಂಘರ್ಷದಲ್ಲಿದ್ದವರು. ಹಾಗಾಗಿ, ಅವರ ಕಥೆಗಳಿಗೆ ವಿಶಿಷ್ಟ ಅರ್ಥವಂತಿಕೆ ಇದೆ. ಅದನ್ನೇ ಅಂತಾರಾಷ್ಟ್ರೀಯ ಸಮುದಾಯ ಗುರುತಿಸಿ ಅವರ ಕೃತಿಗೆ ಬುಕರ್ ಮನ್ನಣೆ ನೀಡಿದೆ ಎಂದು ಜಯಪ್ರಕಾಶ್ ಅಭಿಪ್ರಾಯಪಟ್ಟರು.
ಸಮಾಜಶಾಸ್ತ್ರಜ್ಞ ಡಾ. ಸಿ.ಜಿ. ಲಕ್ಷ್ಮೀಪತಿ ಮಾತನಾಡಿ, ಸುರಕ್ಷಿತ ವಲಯ ಬಿಟ್ಟು ಹೋರಾಟದ ಕಲ್ಲುಮುಳ್ಳಿನ ಸಾರ್ವಜನಿಕ ಹಾದಿ ಆಯ್ದುಕೊಂಡ ಜಯಪ್ರಕಾಶ್, ಎಂದಿಗೂ ತನ್ನತನವನ್ನು ಬಿಟ್ಟುಕೊಡದೆ ಬೇರೆಯವರನ್ನು ಪ್ರಭಾವಿಸುತ್ತಲೇ ಬಂದಿದ್ದಾರೆ. ಚಳವಳಿ ಹಾಗೂ ಬಂಡಾಯದ ಸಂಗಾತಿಯಾಗಿ, ಹಿರಿಯರು- ಕಿರಿಯರೆನ್ನದೆ ಎಲ್ಲರ ಪ್ರೀತಿ ಗಳಿಸಿರುವ ವಿಶಾಲ ಹೃದಯಿ ಎಂದು ಬಣ್ಣಿಸಿದರು.
ಮೈಸೂರಿನ ರಂಗಾಯಣ ನಿರ್ದೇಶಕ ಸತೀಶ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ಲೇಖಕರಾದ ಯೋಗೇಶ್ ಮಾಸ್ಟರ್, ರಮೇಶ್, ರವಿಕುಮಾರ್ ಬಾಗಿ, ಸ್ವಾಮಿ ಆನಂದ್, ಆರ್. ನಾಗರಾಜು, ಬಿ.ಎಂ ನಾಗರತ್ನ, ಬಂಜಗೆರೆ ಜಯಪ್ರಕಾಶ್ ಇತರರು ಇದ್ದರು.