ದೇವಾಲಯದ ಒಳಾಂಗಣ  
ಜಿಲ್ಲೆ

ಅನ್ನಸಂತರ್ಪಣೆಯಿಂದ ಕಷ್ಟ ಪರಿಹಾರ!

ಮಳವಳ್ಳಿ: ದೇವಳದ ಸನ್ನಿಧಿಯಲ್ಲಿ ಅನ್ನಸಂತರ್ಪಣೆ ಮಾಡುವ ಹರಕೆ ಕಟ್ಟಿಕೊಂಡಲ್ಲಿ ಎಲ್ಲ ಸಂಕಷ್ಟಗಳಿಗೂ ಮುಕ್ತಿ ನೀಡಲಿದ್ದಾನೆ ವೀರಭದ್ರೇಶ್ವರಸ್ವಾಮಿ.

ತಾಲೂಕಿನ ಮಿಕ್ಕೆರೆ ಗ್ರಾಮದಲ್ಲಿರುವ ವೀರಭದ್ರೇಶ್ವರಸ್ವಾಮಿ ದೇವಸ್ಥಾನಕ್ಕೆ ತನ್ನದೇ ಆದ ಇತಿಹಾಸವಿದೆ. ಚೋಳರ ಕಾಲಘಟ್ಟದಲ್ಲಿ ದೇವಸ್ಥಾನ ನಿರ್ಮಾಣಗೊಂಡಿದೆ ಎಂಬುದಕ್ಕೆ ಅಲ್ಲಿನ ಕಲ್ಲಿನ ಗೋಡೆಗಳಲ್ಲಿ ಮೀನಿನ ಚಿತ್ರಗಳು ಸೇರಿದಂತೆ ಹಲವು ಶಿಲಾ ಶಾಸನಗಳೇ ಸಾಕ್ಷಿ. ಗ್ರಾಮದ ಹೊರವಲಯದಲ್ಲಿ ದೇವಸ್ಥನಾವಿದ್ದು, ಸುಮಾರು 20 ಅಡಿ ಎತ್ತರದ ಗರುಡ ಕಂಬ ಹಾಗೂ ಪ್ರಶಾಂತ ವಾತವರಣ ಎಂತಹವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಪ್ರಕೃತಿಯ ಮಡಿಲಲ್ಲಿ ದೇವಾಲಯ ಇರುವುದರಿಂದ ಭಕ್ತರ ಪಾಲಿಗೆ ವರವಾಗಿ ಪರಿಣಮಿಸಿದೆ.

ಸಾಹಸ್ರಾರು ಕುಟುಂಬಗಳ ಕುಲದೇವರು: ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ಹಿಟ್ಟನಹಳ್ಳಿ ಕೊಪ್ಪಲು ಗ್ರಾಮದ ವೀರಪ್ಪನ ಕುಟುಂಬ ವಂಶ ಪಾರಂಪರ್ಯವಾಗಿ ಪೂಜೆ ಮಾಡುತ್ತಿದೆ. ಐದು ವರ್ಷಗಳಿಗೊಮ್ಮೆ ನಡೆಯುವ ಒಂದು ಬದನೆಕಾಯಿ ಪರ ಹಾಗೂ ವೀರಭದ್ರೇಶ್ವರಸ್ವಾಮಿ ಕೊಂಡೋತ್ಸವದಲ್ಲಿ ಸುತ್ತಲಿನ ಏಳು ಗ್ರಾಮಗಳ ಜನರು ಪಾಲ್ಗೊಳ್ಳುತ್ತಾರೆ. ಮಿಕ್ಕೆರೆ, ಎಂ.ಕಾಗೇಪುರ, ರಾಮಂದೂರು, ದೋರನಹಳ್ಳಿ, ಕೊದೇನಕೊಪ್ಪಲು, ಆಲದಹಳ್ಳಿ, ಹಿಟ್ಟನಹಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ನೆಲೆಸಿರುವ ಸಹಸ್ರಾರು ಕುಟುಂಬಳಿಗೆ ವೀರಭದ್ರಸ್ವಾಮಿ ಕುಲದೈವವಾಗಿದೆ.

ಹರಕೆಯಿಂದ ಕಷ್ಟಗಳ ಪರಿಹಾರ: ಕಷ್ಟಗಳ ಪರಿಹಾರಕ್ಕಾಗಿ ಭಕ್ತಿಯಿಂದ ಅನ್ನಸಂತರ್ಪಣೆ ಮಾಡಿಸುವ ಹರಕೆ ಕಟ್ಟಿಕೊಂಡವರಿಗೆ ಬಹುತೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬುದು ಇಲ್ಲಿನ ಭಕ್ತರ ನಂಬಿಕೆ. ಮಕ್ಕಳು ಚಂಡಿ ಹಿಡಿಯುವುದು, ಜ್ವರ, ಭೀತಿ ಶಂಕೆ ಹಾಗೂ ವಿವಿಧ ಮನೋರೋಗದಿಂದ ಬಳಲುತ್ತಿರುವರಿಗೆ ದೇವರ ಪಾದುಕೆಗೆ ಪೂಜೆ ಸಲ್ಲಿಸಿ ತಾಯತ ಕಟ್ಟಿಸಿಕೊಂಡು ತೀರ್ಥಪ್ರೋಕ್ಷಣೆ ಮಾಡಿಸಿಕೊಂಡರೆ ನಿವಾರಣೆಯೊಂದಿಗೆ ಮನಶಾಂತಿ ದೊರೆಯುತ್ತದೆ ಎಂಬುದು ಇಲ್ಲಿನ ಪ್ರತೀತಿ.

ವಾರದ ದಿನಗಳಲ್ಲಿ ವಿಶೇಷಪೂಜೆ: ದೇವಸ್ಥಾನದಲ್ಲಿ ಪ್ರತಿದಿನ ಪೂಜಾ ಕೈಂಕರ್ಯಗಳು ಜರುಗಲಿದ್ದು, ಮಂಗಳವಾರ, ಶುಕ್ರವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ನೆರವೇರಲಿವೆ. ಈ ಸಂದರ್ಭದಲ್ಲಿ ಹರಕೆ ಹೊತ್ತವರು ಭಕ್ತ ಸಮೂಹಕ್ಕೆ ಅನ್ನಸಂತರ್ಪಣೆ ಮಾಡುತ್ತಾರೆ.

ಒಂದು ಬದನೆಕಾಯಿ ಪರ ಹಿನ್ನೆಲೆ: ಶತಮಾನಗಳ ಹಿಂದೆ ಗರ್ಭಿಣಿಯೊಬ್ಬರು ಇಲ್ಲಿನ ದೇವಸ್ಥಾನದಲ್ಲಿ ಅನ್ನದಾಸೋಹಕ್ಕೆ ಸಿದ್ಧತೆ ನಡೆಯುತ್ತಿದ್ದ ವೇಳೆ ಬದನೆಕಾಯಿಯನ್ನು ತೆಗೆದುಕೊಂಡು ತನ್ನ ಮನೆಯ ಗುಡಾಣದಲ್ಲಿ ಇಡುತ್ತಾಳೆ. ಸ್ವಲ್ಪ ಸಮಯದ ನಂತರ ಗುಡಾಣದಲ್ಲಿ ಶಬ್ದ ಕೇಳಿಬಂದಾಗ ಭಯಗೊಂಡ ಗರ್ಭಿಣಿ ದೇವಸ್ಥಾನಕ್ಕೆ ಬಂದು ತನ್ನಿಂದಾದ ಪ್ರಮಾದವನ್ನು ಮನ್ನಿಸೆಂದು ದೇವರನ್ನು ಬೇಡುತ್ತಾಳೆ. ಈ ತಪ್ಪಿನ ಪರಿಹಾರವಾಗಿ ಐದು ವರ್ಷಗಳಿಗೊಮ್ಮೆ ಬದನೆಕಾಯಿ ಪರ ಮಾಡಿಸುವುದಾಗಿ ಹರಕೆ ಕಟ್ಟಿಕೊಂಡ ಹಿನ್ನೆಲೆಯಲ್ಲಿ ಇಂದಿಗೂ ಒಂದು ಬದನೆಕಾಯಿ ಪರ ಎಂದು ಭಕ್ತರು ಹಬ್ಬ ಆಚರಿಸುತ್ತಾರೆ.

ಏಳು ಹಳ್ಳಿಗರಿಗೆ ಹಬ್ಬದ ಹೊಣೆಗಾರಿಕೆ: ಬದನೆಕಾಯಿ ಪರ ಹಾಗೂ ವೀರಭದ್ರೇಶ್ವರ ಕೊಂಡೋತ್ಸವವನ್ನು ಐದು ವರ್ಷಕ್ಕೊಮ್ಮೆ ಏಳು ದಿನಗಳ ಕಾಲ ಏಳು ಊರಿನ ಜನರು ಭಕ್ತಿಭಾವದಿಂದ ಆಚರಿಸುತ್ತಾರೆ.ಯುಗಾದಿ ಹಬ್ಬದ ಸಮೀಪದ ನಡೆಯುವ ಈ ಹಬ್ಬವನ್ನು ಹಿಟ್ಟನಹಳ್ಳಿ ಕೊಪ್ಪಲು ಗ್ರಾಮಸ್ಥರು ಸೋಮವಾರ ಸಂಜೆ ಮತ್ತು ಮಂಗಳವಾರ ಬೆಳಗಿನ ಜಾವ ದೇವರ ಉತ್ಸವಗಳನ್ನು ತರುತ್ತಾರೆ. ಮಿಕ್ಕಿರೆ, ಹಿಟ್ಟನಹಳ್ಳಿ ಕೊಪ್ಪಲು, ಆಲದಳ್ಳಿ ಕೊದೇನಕೊಪ್ಪಲು, ದೋರನಹಳ್ಳಿ, ಕಾಗೆಪುರ, ರಾಮಂದೂರು ಗ್ರಾಮಸ್ಥರು ದಿನಕ್ಕೊಂದರಂತೆ ದೇವರ ಸೇವೆ ಹಮ್ಮಿಕೊಂಡು ವಾಡಿಕೆಯಂತೆ ಒಂದು ವಾರ ಆಚರಿಸುತ್ತಾರೆ.

ನವರಾತ್ರಿ, ವಿಜಯದಶಮಿ ವಿಶೇಷ: ಮಹಾಲಯ ಅಮಾವಾಸ್ಯೆಯಂದು ತಿ.ನರಸೀಪುರ ತಾಲೂಕಿನ ಕೊಡಗಳ್ಳಿ ಗ್ರಾಮದ ಪಟೇಲ್ ಜವರಪ್ಪ ಅವರ ಮನೆಗೆ ಉತ್ಸವ ಮೂರ್ತಿ ಕೊಂಡೊಯ್ದು ವಿಶೇಷ ಪೂಜೆ ಮಾಡಿ ದೇವಸ್ಥಾನಕ್ಕೆ ಆಗಮಿಸುವ ಅರ್ಚಕ ವೃಂದ ನವರಾತ್ರಿ ಮೊದಲನೇ ದಿನದ ಪಟ್ಟಕ್ಕೆ ಉತ್ಸವ ಮೂರ್ತಿಯನ್ನು ಕೂರಿಸುವ ಮೂಲಕ ಪೂಜಾ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ.
ನವರಾತ್ರಿ ವೇಳೆ ವಿಶೇಷ ಪೂಜೆ ನಡೆಯಲಿದ್ದು, ವಿಜಯದಶಮಿಯ ಸಂಜೆ ವಿವಿಧ ಹೋಮ, ಹವನ, ಪೂಜೆಗಳು ನೆರವೇರಲಿವೆ. ಬೆಳಗಿನ ಜಾವ ಮಂಗಳವಾದ್ಯಗಳೊಡನೆ ವೀರಗಾಸೆ, ನಂದಿ ಕಂಬ ಕುಣಿತದ ಜತೆಗೆ ವೀರಭದ್ರೇಶ್ವರ ಸ್ವಾಮಿಯ ಉತ್ಸವ ಮೆರವಣಿಗೆ ಮೂಲಕ ಕೆರೆಯಂಗಳದಲ್ಲಿರುವ ಬನ್ನಿಮರಕ್ಕೆ ತಲುಪುತ್ತದೆ.

ಮಾರ್ಗ: ದೇವಸ್ಥನ ಮಳವಳ್ಳಿ ಪಟ್ಟಣದಿಂದ 15 ಕಿ.ಮೀ. ದೂರವಿದ್ದು, ಸುಲ್ತಾನ್ ರಸ್ತೆ ಮಾರ್ಗವಾಗಿ ಮಂಡ್ಯಕ್ಕೆ ತೆರಳುವ ಮಾರ್ಗದಲ್ಲಿ ಹಿಟ್ಟನಹಳ್ಳಿ ಕೊಪ್ಪಲು ಅಥವಾ ಮೈಸೂರು ರಸ್ತೆಯ ಕಿರುಗಾವಲು ಮಾರ್ಗವಾಗಿಯೂ ಇಲ್ಲಿಗೆ ಹೋಗಬಹುದಾಗಿದೆ. ಮಂಡ್ಯದಿಂದ ಬರುವಾಗ ಎಂ.ಕಾಗೇಪುರ ಗ್ರಾಮ ದಾಟುತ್ತಿದ್ದಂತೆ ದೊಡ್ಡ ಕೆರೆ ಏರಿ ಮೇಲೆ ಸಾಗುತ್ತಿದ್ದಂತೆ ಬಲ ಭಾಗಕ್ಕೆ ಹಾಗೂ ಮೈಸೂರಿನಿಂದ ಬರುವವರು ಕಿರುಗಾವಲು ಸಂತೆಮಾಳದಲ್ಲಿ ಎಡಕ್ಕೆ ಚಲಿಸಿ ನಾಲ್ಕು ಕಿ.ಮೀ. ಕ್ರಮಿಸಿದರೆ ಮಿಕ್ಕೆರೆ ಗ್ರಾಮದ ಹೊರವಲಯದಲ್ಲಿ ಎಡಭಾಗಕ್ಕೆ ದೇವಸ್ಥಾನ ಕಾಣಸಿಗುತ್ತದೆ.

ಶ್ರೀವೀರಭದ್ರಸ್ವಾಮಿಗೆ ನಂಬಿಕೆಯಿಂದ ಪೂಜೆ ಸಲ್ಲಿಸಿ ಹರಕೆ ಕಟ್ಟಿಕೊಂಡರೆ ಕುಟುಂಬದಲ್ಲಿರುವ ಯಾವುದೇ ಸಮಸ್ಯೆಗಳು ನಿವಾರಣೆಯಾಗುತ್ತವೆ. ಸ್ವಾಮಿಯ ಕೃಪೆಯಿಂದ ನನ್ನ ಮನದ ಬೇಡಿಕೆಗಳು ಈಡೇರಿದ್ದು, ವ್ಯವಹಾರದಲ್ಲಿ ಯಶಸು ಹಾಗೂ ಕುಟುಂಬದಲ್ಲಿ ನೆಮ್ಮದಿ ದೊರೆತಿದೆ.
ವೀರಣ್ಣ ಭಕ್ತ, ಹಿಟ್ಟನಹಳ್ಳಿಕೊಪ್ಪಲು

ನಮ್ಮ ಕುಟುಂಬದವರು ವಂಶಪಾರಂಪರ್ಯವಾಗಿ ವೀರಭದ್ರೇಶ್ವ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯ ಮಾಡುತ್ತಿದ್ದಾರೆ. ಜ್ವರ ಮತ್ತು ಭೀತಿ ಶಂಕೆಗೆ ಒಳಗಾದವರು ದೇವರ ತಾಯಿತ ಕಟ್ಟಿಸಿಕೊಂಡರೆ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ ಕೌಟುಂಬಿಕ ಸಮಸ್ಯೆ ಮತ್ತು ವ್ಯಾವಹಾರಿಕ ಯಶಸ್ಸಿಗಾಗಿ ಭಕ್ತಿಯಿಂದ ಅನ್ನಸಂತರ್ಪಣೆ ಮಾಡಿಸುವುದಾಗಿ ಹರಕೆ ಕಟ್ಟಿಕೊಳ್ಳುವ ಭಕ್ತರಿಗೆ ಯಶಸ್ಸು ಲಭಿಸಿರುವ ನಿದರ್ಶನಗಳಿವೆ.
ವೀರೇಶ, ಅರ್ಚಕ ವೀರಭದ್ರಸ್ವಾಮಿ ದೇವಸ್ಥಾನ