ತಿ.ನರಸೀಪುರ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತಹ ಕುಟುಂಬದ ಬಿಪಿಎಲ್ ಕಾರ್ಡ್ ರದ್ದಾಗಲಿದೆ. ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಆಹಾರವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಹುಣಸೂರು ಬಸವಣ್ಣ ಹೇಳಿದರು.
ವರುಣ ವಿಧಾನಸಭಾ ಕ್ಷೇತ್ರದ ತಾಲೂಕಿನ ಹುಣಸೂರು ಗ್ರಾಮದಲ್ಲಿ ಭಾನುವಾರ ಅನ್ನಭಾಗ್ಯ ಯೋಜನೆಯ ಹೆಚ್ಚುವರಿ 5 ಕೆಜಿ ಅಕ್ಕಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಸಿವು ಮುಕ್ತ ಕರ್ನಾಟಕ ಅನ್ನಭಾಗ್ಯ ಯೋಜನೆ ಗುರಿಯಾಗಿದೆ. ಅನ್ನಭಾಗ್ಯ ಯೋಜನೆಯ ಪಡಿತರ ಹಸಿವು ನೀಗಿಸಲು ಉಪಯೋಗವಾಗಬೇಕು ಎಂದರು.
ಬಡವರು ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ಅಕ್ಕಿ ವಿತರಣೆ ಮಾಡುತ್ತಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡವರ ಮತ್ತು ಹಿಂದುಳಿದ ಸಮುದಾಯಗಳ ಹಿತವನ್ನು ಕಾಪಾಡಿದ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿ ಎಂದರು.
ಕಿರಗಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ನಿಂಗರಾಜು, ಮಾಜಿ ಉಪಾಧ್ಯಕ್ಷ ನಾಗರಾಜು, ಭಾಗ್ಯಾ, ಕೃಷ್ಣಗಾಂಧಿ, ಮಹದೇವ, ಶಿವರಾಜು, ಕಾಂಗ್ರೆಸ್ ಮುಖಂಡರಾದ ಪುಟ್ಟರಾಜು, ಚಿಕ್ಕಸ್ವಾಮಿ, ರಾಜಪ್ಪ, ಸತೀಶ್, ಸಿದ್ದರಾಜು, ಮುದ್ದಪ್ಪ ಇತರರು ಇದ್ದರು.