ಚಾಮರಾಜನಗರ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಅನ್ನಭಾಗ್ಯವು ಸಹ ಒಂದು ಪ್ರಮುಖ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಬಡಜನರ ಹಸಿವು ನೀಗಲು ಕಂಡುಕೊಂಡ ಯೋಜನೆ ಅನ್ನಭಾಗ್ಯ. ಆಹಾರ ಭದ್ರತಾ ಯೋಜನೆಯಡಿ ಪ್ರತಿ ಪಡಿತರದಾರನಿಗೆ ತಲಾ 10 ಕೆ.ಜಿ ಆಹಾರಧಾನ್ಯ ಒದಗಿಸುವ ಯೋಜನೆ ಅನ್ನಭಾಗ್ಯ.
ಆದ್ಯತಾ ಮತ್ತು ಅಂತ್ಯೋದಯ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಹೆಚ್ಚುವರಿಯಾಗಿ ವಿತರಿಸಲು ಉದ್ದೇಶಿಸಲಾಗಿದ್ದ 5 ಕೆಜಿ ಅಕ್ಕಿಯ ಬದಲಾಗಿ ಪಡಿತರ ಚೀಟಿ ಕುಟುಂಬದಲ್ಲಿನ ಪ್ರತಿ ಫಲಾನುಭವಿಗೆ ಪ್ರತಿ ಕೆ.ಜಿ.ಗೆ 34 ರೂ.ಗಳಂತೆ 5 ಕೆಜಿ.ಗೆ 170 ರೂ.ಗಳನ್ನು ಜುಲೈ 2023ರಿಂದ ಡಿಸೆಂಬರ್ 2024ರವರೆಗೆ ಪಡಿತರ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲಾಗುತ್ತಿತ್ತು. ಅನ್ನಭಾಗ್ಯ ಯೋಜನೆಯಡಿ ಹಣದ ಬದಲು 10 ಕೆಜಿ ಅಕ್ಕಿಯನ್ನು ನೀಡಲು ನಿರ್ಧರಿಸಿ 2025ರ ಫೆಬ್ರವರಿಯಿಂದಲೇ ಡಿಬಿಟಿ ಹಣದ ಬದಲಾಗಿ ಹೆಚ್ಚುವರಿ 5 ಕೆಜಿ ಅಕ್ಕಿಯನ್ನು ವಿತರಿಸಲಾಗುತ್ತಿದ್ದು, ಒಟ್ಟಾರೆ 10 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಯೋಜನೆಯು ನೆಮ್ಮದಿಯ ಬದುಕಿಗೆ ಆಹಾರ ಭದ್ರತೆ ಅನ್ನಭಾಗ್ಯ ಎನ್ನುವ ಘೋಷವಾಕ್ಯದೊಂದಿಗೆ ಆರಂಭಗೊಂಡಿತು. ಚಾಮರಾಜನಗರ ಜಿಲ್ಲೆಯಲ್ಲಿ 2023ರ ಜುಲೈನಿಂದ 2024ರ ಡಿಸೆಂಬರ್‌ವರೆಗೆ ಒಟ್ಟು 18 ತಿಂಗಳಿಗೆ 2,63,485 ಪಡಿತರ ಚೀಟಿದಾರರ 8,21,070 ಫಲಾನುಭವಿಗಳಿಗೆ 225.85 ಕೋಟಿ ಗೂ ಹೆಚ್ಚು ಹಣವನ್ನು ಡಿಬಿಟಿ ಮೂಲಕ ಪಡಿತರ ಚೀಟಿದಾರರ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ.