ಜಿಲ್ಲೆ

ಅನ್ನದಾತರ ಬದುಕಿಗೆ ಬರೆ ಎಳೆದ ದರ!

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಅತಿವೃಷ್ಟಿ ಆಗಲಿ, ಅನಾವೃಷ್ಟಿಯಾಗಲಿ ಮೊದಲು ತತ್ತರಿಸುವುದು ಅನ್ನದಾತ. ಇನ್ನೇನು ಚೇತರಿಕೆ ಕಂಡು ಬದುಕು ಹಳಿಗೆ ಬರುತ್ತಿದೆ ಎನ್ನುವ ಹೊತ್ತಿನಲ್ಲೇ ಮತ್ತೊಂದು ಕಷ್ಟ ಬರುತ್ತದೆ. ಹೀಗಾಗಿ ರೈತರ ಬದುಕು ಶೋಚನೀಯ. ಇದೀಗ ಕೃಷಿ ಸಂಬಂಧಿತ ಚಟುವಟಿಕೆಗಳ ದರ ದುಬಾರಿಯಾಗಿದ್ದು, ಇದು ಅನ್ನದಾತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ರಾಜ್ಯಾದ್ಯಂತ ಅಂದಾಜು 43 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಮತ್ತು ನೀರಾವರಿ ಒಳಗೊಂಡಿರುವ ಕೃಷಿ ಭೂಮಿಯಲ್ಲಿ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರು ಅಧಿಕ ಸಂಖ್ಯೆಯಲ್ಲಿದ್ದಾರೆ. ಇವರೆಲ್ಲ ಕೃಷಿ ಉಳುಮೆಗಾಗಿ ಬಾಡಿಗೆ ಟ್ರಾೃಕ್ಟರ್, ಯಂತ್ರೋಪಕರಣ, ಜೋಡೆತ್ತುಗಳ ಮೇಲೆ ಹೆಚ್ಚು ಅವಲಂಬಿಸಿದ್ದಾರೆ. ಅಲ್ಲದೆ, 10 ರಿಂದ 20 ಎಕರೆ ಕ್ಕಿಂತ ಹೆಚ್ಚು ಜಮೀನು ಹೊಂದಿರುವ ಲಕ್ಷಾಂತರ ರೈತರು ಕೃಷಿ ಚಟುವಟಿಕೆಗಳಿಗಾಗಿ ಸ್ವಂತ ಟ್ರಾೃಕ್ಟರ್, ಯಂತ್ರೋಪಕರಣ ಹೊಂದಿದ್ದಾರೆ. ಆದರೆ, ಯಂತ್ರೋಪಕರಣ ಮಾರಾಟ ಹೆಚ್ಚಳದಿಂದಾಗಿ ಎಲ್ಲ ವರ್ಗದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಆದಾಯವೆಲ್ಲ ಬಿತ್ತನೆಗೆ: ಇದೀಗ ಕೃಷಿ ಯಂತ್ರೋಪಕರಣ ಖರೀದಿ ದರ, ಬಾಡಿಗೆ, ಕಾರ್ಮಿಕರ ಕೂಲಿ ಹೆಚ್ಚಳದಿಂದ ರೈತರು ಇನ್ನಷ್ಟು ಬಸವಳಿದಿದ್ದಾನೆ. ದುಡಿದ ದುಡ್ಡೆಲ್ಲ ಇದಕ್ಕೆ ಖರ್ಚಾಗುತ್ತಿರುವ ಕಾರಣ ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿದೆ.

ಏಕಾಏಕಿ ಕೃಷಿ ಸಲಕರಣೆಗಳ ಮಾರಾಟ ದರದಲ್ಲಿ ಶೇ.20ರಷ್ಟು ಹೆಚ್ಚಳದ ಬೆನ್ನಲ್ಲೆ ಕೃಷಿ ಯಂತ್ರೋಪಕರಣ ಬಾಡಿಗೆ ಕೂಡ ಶೇ.30ರಷ್ಟು ಏರಿಕೆ ಕಂಡಿದೆ. ಇತ್ತ ಕಾರ್ಮಿಕರ ದಿನ ಕೂಲಿ ಶೇ.18ರಷ್ಟು ಹೆಚ್ಚಳವಾಗಿದೆ. ಇದರಿಂದಾಗಿ ರೈತರು ಕೃಷಿ ಉತ್ಪನ್ನಗಳಿಂದ ಬರುವ ಆದಾಯವೆಲ್ಲ ಬಿತ್ತನೆ ಬೀಜ, ಯಂತ್ರೋಪಕರಣಗಳ ಬಾಡಿಗೆ, ಕಾರ್ಮಿಕರ ಕೂಲಿಗೆ ಭರಿಸಬೇಕಾಗಿದೆ.

ಉಳುಮೆಗೆ 5000 ರೂ. ಖರ್ಚು: 2024-25ನೇ ಸಾಲಿನ ಅವಧಿಯಲ್ಲಿಯೇ ಬಿತ್ತನೆ ಬೀಜ, ಗೊಬ್ಬರ, ಕಾರ್ಮಿಕರ ಕೂಲಿ, ಯಂತ್ರೋಪಕರಣಗಳ ಬಾಡಿಗೆ, ಡೀಸೆಲ್ ಬೆಲೆ ಏರಿಕೆಯಾಗುತ್ತಿದೆ ವಿನಃ ಕಡಿಮೆಯಾಗುತ್ತಿಲ್ಲ. ಈ ಮೊದಲು ಟ್ರಾೃಕ್ಟರ್ ಚಾಲಿತ ನೇಗಿಲ, ರೂಟ್‌ವೇಟರ್, ಕಲ್ಟಿವೇಟರ್‌ಗಳ ಬಾಡಿಗೆ ಗಂಟೆಗೆ 650 ರಿಂದ 800 ರೂ. ವರೆಗೆ ಇತ್ತು. ಆದರೆ, ಡಿಸೆಂಬರ್‌ನಲ್ಲಿ ಅದು 1000 ರೂ. ಏರಿಕೆ ಕಂಡಿದೆ. ಪವರ್ ಟೆಲ್ಲರ್ ದಿನದ ಬಾಡಿಗೆ 3,000 ರೂ. ಏರಿಕೆ ಕಂಡಿದೆ.

ಕಾರ್ಮಿಕರ ಕೂಲಿ ದಿನಕ್ಕೆ 450 ರೂ. ವರೆಗೆ ಹೆಚ್ಚಳವಾಗಿದೆ. ಪರಿಣಾಮ ಒಂದು ಎಕರೆ ಹೊಲ ಉಳುಮೆಗೆ 5000 ರೂ. ಖರ್ಚು ಮಾಡಬೇಕಾಗಿದೆ. ಮತ್ತೊಂದೆಡೆ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ದರ ಇಳಿಕೆಯಾಗುತ್ತಿದೆ. ಇದರಿಂದಾಗಿ ಕೃಷಿ ಚಟುವಟಿಕೆಗಳ ವೆಚ್ಚ ದುಬಾರಿಯಾಗಿ ಪರಿಣಿಮಿಸಿದೆ. ಸರ್ಕಾರ ಕೃಷಿ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿ ಕಡಿತಗೊಳಿಸಿದ್ದರಿಂದ ಸಮಸ್ಯೆ ಉಂಟಾಗಿದೆ ಎಂದು ರೈತರು ದೂರಿದ್ದಾರೆ.

ಹೆಚ್ಚಳ ಅನಿವಾರ್ಯ:ಸದ್ಯ 50 ಎಚ್‌ಪಿ ಟ್ರಾೃಕ್ಟರ್ ದರ 10 ಲಕ್ಷ ರೂ. ವರೆಗೆ ಇದೆ. ಇನ್ನೂ ನೇಗಿಲ, ರೂಟ್‌ವೇಟರ್, ಕಲ್ಟಿವೇಟರ್‌ಗಳು 80,000 ರಿಂದ 1,20,000 ರೂ. ವರೆಗೆ, ಪವರ್ ಟೆಲ್ಲರ್ 5 ಲಕ್ಷ ರೂ. ಹೆಚ್ಚಳವಾಗಿದೆ. ಮತ್ತೊಂದೆಡೆ ಡೀಸೆಲ್ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. 18ರಿಂದ 20 ಲಕ್ಷ ರೂ. ವರೆಗೆ ಬಂಡವಾಳ ಹಾಕಿ ಕಡಿಮೆ ಬಾಡಿಗೆಯಲ್ಲಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಬಾಡಿಗೆ ದರವನ್ನು ಗಂಟೆಗೆ 200 ರೂ. ವರೆಗೆ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ಟ್ರಾೃಕ್ಟರ್ ಮಾಲೀಕರಾದ ಮಾರುತಿ ನಾಯಕ, ಪರುಶರಾಮ ಹೊಸಮನಿ ತಿಳಿಸಿದ್ದಾರೆ.

ಪ್ರಸ್ತುತ ದಿನಗಳಲ್ಲಿ ಟ್ರಾೃಕ್ಟರ್, ಕೃಷಿ ಯಂತ್ರೋಪಕರಣ, ಬಿತ್ತನೆ ಬೀಜ, ಗೊಬ್ಬರ ಸೇರಿ ಎಲ್ಲ ವಸ್ತುಗಳ ಬೆಲೆ ಏರಿಕೆಯಿಂದಾಗಿ ರೈತರು ಉಳುಮೆ ಮಾಡುವುದು ಕಷ್ಟವಾಗಿದೆ. ಸರ್ಕಾರವು ಸಬ್ಸಿಡಿ ಯೋಜನೆಗಳಿಗೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಯಂತ್ರೋಕರಣಗಳ ಮಾರಾಟ ದರ ಹೆಚ್ಚಳವಾಗುತ್ತಿದೆ. | ಚೂನಪ್ಪ ಪೂಜೇರ ರಾಜ್ಯಾಧ್ಯಕ್ಷ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ