ಅರಸೀಕೆರೆ : ಅನ್ನದಾತನ ಹಿತ ಕಾಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಎರಡು ಎಪಿಎಂಸಿ ಕಾಯ್ದೆ ಜಾರಿಗೆ ತಂದಿದೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ತಾಲೂಕಿನ ಗೀಜಿಹಳ್ಳಿ ಗ್ರಾಮದ ಬಳಿ ಅಂದಾಜು 5 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಮಾದರಿ ಹಣ್ಣು ಮತ್ತು ತರಕಾರಿ ಉಪ ಮಾರುಕಟ್ಟೆ ಪ್ರಾಣಂಗಣದ ನೂತನ ಕೇಂದ್ರವನ್ನು ಸೋಮವಾರ ಸಂಜೆ ಉದ್ಘಾಟಿಸಿ ಮಾತನಾಡಿದರು. ಬೆಳೆ ಬೆಳೆದ ರೈತನಿಗೆ ನಿಖರ ಬೆಲೆ ದೊರೆಯಬೇಕು ಎನ್ನುವ ಆಶಯ ಸರ್ಕಾರದ್ದಾಗಿದೆ. ಕಾಯ್ದೆಗಳ ಅನುಸಾರ ತನ್ನ ಕೃಷಿ ಜಮೀನು, ರಾಜ್ಯ, ಹೊರ ರಾಜ್ಯಗಳ ಎಪಿಎಂಸಿ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಗೆ ಯಾರು, ಎಲ್ಲಿಬೇಕಾದರೂ ದಾಸ್ತಾನು ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದ್ದು ನಿರೀಕ್ಷಿತ ಆದಾಯ ದೊರೆಯಲಿದೆ. ಜತೆಗೆ ಬೆಲೆ ಕುಸಿತದ ಸಂದರ್ಭದಲ್ಲಿ ಸರ್ಕಾರವೇ ಖರೀದಿ ಮಾಡಲಿದೆ. ಅನ್ನದಾತನ ಆಶಯಕ್ಕೆ ತಕ್ಕಂತೆ ಸೆಸ್ ಕೂಡ ಕಡಿಮೆ ಮಾಡಲಾಗಿದ್ದು ಎಲ್ಲರೂ ಇದರ ಪ್ರಯೋಜನ ಪಡೆಯಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯದ ಸಹಕಾರ ಬ್ಯಾಂಕ್‌ಗಳಲ್ಲಿ ಅರ್ಹ ರೈತರಿಗೆ ಸಾ ಸೌಲಭ್ಯ ನೀಡಲು ಈಗಾಗಲೇ ಸಂಬಂಧಿಸಿದ ಬ್ಯಾಂಕ್‌ಗಳಿಗೆ ಸೂಚನೆ ನೀಡಲಾಗಿದೆ. ಜಿಲ್ಲೆಯ ಸಹಕಾರ ಬ್ಯಾಂಕ್ ವ್ಯವಸ್ಥಾಪಕರ ಕಿರಿಕಿರಿ ನನ್ನ ಗಮನಕ್ಕೆ ಬಂದಿದ್ದು ಕ್ರಮದ ಲೋಪ ಸರಿಪಡಿಸುವ ಎಚ್ಚರಿಕೆ ನೀಡಲಾಗಿದ್ದು ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕರಿಗೆ ಹೊಗಳಿಕೆ
ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಸರಿಯಾದ ರೀತಿ ಅಧಿಕಾರ ದೊರೆತಿಲ್ಲ. ಸದನದಲ್ಲಿ 224 ಶಾಸಕರ ಪೈಕಿ ಯಾವುದೇ ದಾಖಲೆ ನೋಡದೇ ಕೃಷಿ, ನಿರಾವರಿ, ಎಪಿಎಂಸಿ ಕುರಿತು ವಿಷಯ ಪ್ರಸ್ತಾಪಿಸುವ ಏಕೈಕ ವ್ಯಕ್ತಿಸಾಮರ್ಥ್ಯ ಅವರಲ್ಲಿದೆ. ಇದು ಸಭಾಧ್ಯಕ್ಷರಿಗೂ ಗೊತ್ತಿದ್ದು 10 ನಿಮಿಷ ಅವಕಾಶ ನೀಡುವ ಬದಲು ಒಂದು ತಸು ಚರ್ಚೆಗೆ ಅವಕಾಶ ನೀಡುತ್ತಾರೆ.ಶಾಸಕರು ಲಕ್ಷ್ಮೀ ಪುತ್ರರಲ್ಲದಿದ್ದರೂ, ಸರಸ್ವತಿ ಪುತ್ರರಾಗಿದ್ದಾರೆ ಎಂದು ಸಭೆಯಲ್ಲಿ ಸರ್ಕಾರದ ಸಾಧನೆಗಳನ್ನು ಬಿಚ್ಚಿಡುವ ಬದಲು ಸಚಿವ ಎಸ್.ಟಿ.ಸೋಮಶೇಖರ್ ಚುನಾವಣಾ ಸ್ಟಾರ್ ಪ್ರಚಾರಕರಂತೆ ಕೆ.ಎಂ.ಶಿವಲಿಂಗೇಗೌಡರನ್ನು ಹಾಡಿ ಹೊಗಳಿದ್ದು ಕಾರ್ಯಕ್ರಮದ ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡರಿಗೆ ಮುಜುಗರ ಉಂಟುಮಾಡಿದ್ದು ಚರ್ಚೆಗೆ ಗ್ರಾಸವಾಯಿತು.
ಟಾಂಗ್ .
ವೇದಿಕೆಯಲ್ಲಿ ಆಸೀನರಾಗಿದ್ದ ಪ್ರಮುಖರನ್ನು ಸ್ವಾಗತಿಸುವ ವೇಳೆ ಹಾರದ ಜತೆಗೆ ನಿಂಬೆಹಣ್ಣು ನೀಡಿದ್ದರಿಂದ ಸಚಿವ ಎಸ್.ಟಿ.ಸೋಮಶೇಖರ್ ಕೆಲ ಕಾಲ ಗಲಿಬಿಲಿಗೊಂಡರು.ಅಲ್ಲದೇ ಮಾತನಡುವ ವೇಳೆ ನನಗೆ ಹಾಸನ ಜಿಲ್ಲೆಯಲ್ಲಿ ನಿಂಬೆಹಣ್ಣು ಕೊಡುವವರನ್ನು ಕಂಡರೆ ಭಯವಾಗುತ್ತದೆ. ಆದರೆ ಶಾಸಕ ಕೆ.ಎಂ.ಶಿವಲಿಂಗೇಗೌಡರ ಭರವಸೆ ಮೇರೆಗೆ ಸ್ವೀಕರಿಸಿದ್ದೇನೆ ಏನು ತೊಂದರೆಯಿಲ್ಲ ತಾನೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಚ್.ಡಿ.ರೇವಣ್ಣಗೆ ಟಾಂಗ್ ನೀಡಿ ಕಾಲೆಳೆದರು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ರೈತ ಬೆಳೆದ ಬೆಳೆ ಹಾಳಾಗದಂತೆ ನೋಡಿಕೊಳ್ಳಲು ಶಿತಲೀಕರಣ ಘಟಕ ತೆರೆಯುವ ಅಗತ್ಯವಿದೆ. ವಸ್ತವ ಮನಗಂಡು ನಬಾರ್ಡ್ ಮೂಲಕ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನ ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜ್ ಮತನಾಡಿದರು.
ತಹಸೀಲ್ದಾರ್ ವಿಭಾ ವಿ ರಾಥೋಡ್, ಎಪಿಎಂಸಿ ಅಧೀಕ್ಷಕ ಇಂಜಿನಿಯರ್ ಎಸ್.ಎಸ್.ಖಾದ್ರಿ, ಜಿಲ್ಲಾ ಉಪನಿರ್ದೇಶಕ ಶ್ರೀಹರಿ, ಕಾರ್ಯದರ್ಶಿ ಸಿದ್ದರಂಗಪ್ಪ, ಅಧ್ಯಕ್ಷ ಮುದುಡಿ ಜಯಕುಮಾರ್ (ಶಿವಪ್ಪ), ಉಪಾಧ್ಯಕ್ಷ ಕುಮಾರ್, ಗೀಜಿಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದಗಂಗಪ್ಪ ಇತರರು ಇದ್ದರು.