ಜಿಲ್ಲೆ

ಅನ್ನದ ಮಹತ್ವ ಅರಿತರೆ ಎಲ್ಲರೂ ಶ್ರೀಮಂತರೇ

ಈ ಭೂಮಂಡಲದಲ್ಲಿ ಎಲ್ಲ ಜೀವರಾಶಿಗಳು ಬದುಕಲು ಮಣ್ಣು, ನೀರು, ಸೂರ್ಯ, ಗಾಳಿ ಎಲ್ಲವೂ ದುಡಿಯುತ್ತಿವೆ. ಸೃಷ್ಟಿಕರ್ತ ಎಲ್ಲವನ್ನೂ ನೀಡಿದ್ದಾನೆ. ಈ ಭೂಮಿಗೆ, ನೀರಿಗೆ, ಸೂರ್ಯನಿಗೆ, ಗಾಳಿಗೆ ಬೆಲೆ ಕಟ್ಟಲು ಸಾಧ್ಯವೆ?

ಮನುಷ್ಯನೇ ನೀನು ಸಿರಿವಂತ. ನಿನಗೆ ಎಲ್ಲವೂ ಈ ಭೂಮಂಡಲದಲ್ಲಿ ಸಿಗುತ್ತಿದೆ. ಅನುಭವಿಸು. ಆನಂದದಿಂದ ಬದುಕಲು ಕಲಿ!

ಒಬ್ಬ ರಾಜನ ಕಥೆ ನೆನಪಾಗುತ್ತದೆ. ಮೈದಾಸ ಹೆಸರಿನ ರಾಜ. 15 ವರ್ಷದ ಸುಂದರವಾದ ಒಬ್ಬಳೇ ಮಗಳಿದ್ದಳು. ದೇವರು ಎಲ್ಲವನ್ನೂ ನೀಡಿದ್ದ. ಆದರೆ, ರಾಜನಿಗೆ ಪ್ರತಿದಿನ ಕನಸಿನಲ್ಲಿ ಬಂಗಾರ ಕಾಣಿಸುತ್ತಿತ್ತು.

ಒಂದು ದಿನ ಮೈದಾಸನಿಗೆ ದೇವರು ಪ್ರತ್ಯಕ್ಷನಾದ. ‘ರಾಜನೆ, ನಿನಗೇನು ಬೇಕು ಹೇಳು’ ಅಂದ. ಆಗ ರಾಜ, ನಾನು ಮುಟ್ಟಿದ್ದೆಲ್ಲ ಬಂಗಾರ ಆಗಬೇಕು. ಅಂತಹ ವರ ನೀಡು’ ಅಂದ! ದೇವರು ಹಿಂದು ಮುಂದು ನೋಡದೆ ಕೊಟ್ಟೇಬಿಟ್ಟ. ಮೈದಾಸ ರಾಜ ಬೆಳಗ್ಗೆ ಮೂದಲು ತನ್ನ ಹಾಸಿಗೆ ಮುಟ್ಟಿದ. ಬಂಗಾರ ಆಯಿತು. ಆನಂದವೋ ಆನಂದ ಆತನಿಗೆ. ಈ ಆನಂದದಲ್ಲಿ ಊಟ ಮಾಡುವುದನ್ನೇ ಮರೆತಿದ್ದ! ಸುಮಾರು 12 ಗಂಟೆ. ಹೊಟ್ಟೆ ಹಸಿಯಿತು. ಊಟ ತರಲು ಹೇಳಿದ. ರಾಜನ ಮಗಳು ಊಟ ತಂದಳು. ತಟ್ಟೆಯಲ್ಲಿ ಹೋಳಿಗೆ ತುಪ್ಪ ಅನ್ನ, ತರತರಹದ ತಿನಿಸಿಗಳು. ಇನ್ನೇನು ಊಟ ಮಾಡಬೇಕು ಅಂತ ತಟ್ಟೆ ಮುಟ್ಟಿದ. ಅದು ಬಂಗಾರವಾಯಿತು. ಇದೇನಿದು ಅಂತ ಮಗಳನ್ನು ಮುಟ್ಟಿದ. ಮುದ್ದಿನ ಮಗಳು ಬಂಗಾರವಾದಳು. ಹಸಿವು ತಡೆಯಲು ಆಗುತ್ತಿಲ್ಲ. ಆಗ ರಾಜನಿಗೆ ಅರಿವಾಯಿತು. ಐಶ್ವರ್ಯ ಇದ್ದರೆ ಏನು ಮಾಡುವುದು? ಬದುಕಲು ಅನ್ನ ಬೇಕು.

ಆಗ ದೇವರನ್ನು ಎಂದು ಪ್ರಾರ್ಥಿಸಿದ. ಪ್ರತ್ಯಕ್ಷನಾದ. ‘ನನಗೆ ಏನೂ ಬೇಡ ಭಗವಂತ. ನಾನು ಮೊದಲು ಹೇಗೆ ಇದ್ದೆನೋ ಹಾಗೆ ಮಾಡು’ ಎಂದು ಬೇಡಿಕೊಂಡ. ದೇವರು ವರವನ್ನು ಹಿಂದಕ್ಕೆ ಪಡೆದ. ಆಗ ರಾಜನಿಗೆ ಎಚ್ಚರವಾಯಿತು. ಆ ಸ್ಥಾನ ಹೇಗೆ ಇತ್ತೋ ಹಾಗೇ ಇತ್ತು. ಇದು ಎಲ್ಲ ನಡೆದಿದ್ದು ಕನಸಿನಲ್ಲಿ.

ಅನ್ನದ ಮಹತ್ವ ಅರಿತರೆ ನಾವು ಯಾವತ್ತೂ ಬಡವರಲ್ಲ ಅಂತ ಈ ಕಥೆಯಿಂದ ನಮಗೆ ಅರ್ಥವಾಗುತ್ತದೆ. ಎಷ್ಟೇ ಶ್ರೀಮಂತರಾದರೂ ತಿನ್ನಲು ಅನ್ನವೇ ಬೇಕು. ಕುಡಿಯಲು ನೀರು ಬೇಕು. ಸೃಷ್ಟಿಕರ್ತ ಏನು ಮಾಡಿದ್ದಾನೆ ಅದು ಶಾಶ್ವತ. ಬಂಗಾರ ನಾವು ಮಾಡಿದ ಸಂಪತ್ತು. ನಮ್ಮ ಹಸಿವು ನೀಗಿಸುವುದಿಲ್ಲ.

ನಮ್ಮ ಋಷಿಗಳು ತಿಂಗಳಿಗೆ ಒಂದು ದಿನ ಏಕಾದಶಿ ಉಪವಾಸ ಅಂತ ಮಾಡಿದರು. ಒಂದು ದಿನ ನೀರು ಅನ್ನ ಬಿಟ್ಟು ಇರಲಿ ಅಂತ. ಒಂದು ದಿನದಲ್ಲಿ ನಮಗೆ ಅನ್ನದ ಹಾಗೂ ನೀರಿನ ಬೆಲೆ ತಿಳಿಯಲಿ ಅಂತ ಏಕಾದಶಿ ಪದ್ಧತಿ ಪ್ರಾರಂಭಿಸಿದರು.

ಅನ್ನದ ಬೆಲೆ ಅರಿತರೆ ಎಲ್ಲರೂ ಶ್ರೀಮಂತರೇ. ಈ ಭೂಮಂಡಲದಲ್ಲಿ ಯಾರೂ ಬಡವರಲ್ಲ.

ನಿರೂಪಣೆ: ತುಕಾರಾಂ ಬ. ಜಾಧವ, ಕನಕೂರ

ಬೇಡ ಸಂತನಾದ ಕತೆ: ಒಂದು ದಿನ ಬೇಡ ಪಕ್ಷಿಗಳಿಗೆ ಬಲೆ ಹಾಕಿರುತ್ತಾನೆ. ಅದರಲ್ಲಿ ಹಲವು ಹಣ್ಣುಗಳನ್ನು ಹಾಕಿರುತ್ತಾನೆ. ಪಕ್ಷಿಗಳು ಹಾರಾಡುತ್ತ ಬರುತ್ತವೆ. ಅದರಲ್ಲಿ ಯುವ ಪಕ್ಷಿ, ಸುಂದರವಾದ ಹಣ್ಣುಗಳಿವೆ ಎಲ್ಲರೂ ಬನ್ನಿ ಅಂತ ಹೇಳುತ್ತದೆ. ಉಳಿದ ಹಕ್ಕಿಗಳು ಇಲ್ಲಿ ಯಾವತ್ತೂ ಹಣ್ಣು ಇರುವುದಿಲ್ಲ. ಇವತ್ತು ಇದೆ ಅಂದ್ರೆ ತಿನ್ನುವುದು ಬೇಡವೆಂದು ಹೇಳುತ್ತವೆ. ಹಿರಿಯರ ಮಾತು ಕೇಳದೆ ಯುವ ಪಕ್ಷಿ ಹಣ್ಣು ತಿನ್ನಲು ಹೋಗಿ ಬಲೆಗೆ ಸಿಲುಕಿತು.

ಆ ದಿನ ರಾತ್ರಿ ಪೂರ್ತಿ ಎಲ್ಲ ಪಕ್ಷಿಗಳು ಅಲ್ಲೇ ಆಹಾರ ಸೇವಿಸಿ ಬೆಳಗ್ಗೆ ಎದ್ದ ತಕ್ಷಣ ಹಾಡಲು ಪ್ರಾರಂಭಿಸಿದವು. ಅಷ್ಟರಲ್ಲಿ ಬೇಡ ಬಂದಿದ್ದ; ಅಲ್ಲೆ ನಿಂತ. ಬಲೆಗೆ ಸಿಕ್ಕ ಪಕ್ಷಿಯು ಹಾಡಲು ಪ್ರಾರಂಭಿಸಿತು. ಆಗ ಅಲ್ಲಿರುವ ಪಕ್ಷಿಗಳು,‘ನಿನ್ನ ಕೊನೆಯ ಕ್ಷಣ ಬಂದಿದೆ. ನೀನು ಹಾಡುತ್ತಿಯಲ್ಲ ಎಂದು ಕೇಳಿದವು. ಬಲೆಗೆ ಸಿಕ್ಕ ಪಕ್ಷಿ ಹೇಳಿತು. ನಾವು ಯಾವತ್ತೂ ಹಾಡುತ್ತ ಬಂದಿದ್ದೇವೆ. ಸಾವು ಬಂದಿದೆ ಅಂತ ಹಾಡು ನಿಲ್ಲಿಸುವುದಿಲ್ಲ. ಇದು ನಮ್ಮ ಕಾಯಕ ಎಂದು ಹೇಳಿತು. ಈ ಮಾತು ಕೇಳಿದ ಬೇಡ ಬಲೆಗೆ ಸಿಲುಕಿದ ಪಕ್ಷಿಯನ್ನು ಬಿಡುಗಡೆ ಮಾಡಿ, ‘ಇಂದಿನಿಂದ ನೀನೇ ನನ್ನ ಗುರು. ಇರುವವರೆಗೆ ಸಂತೋಷದಿಂದ ಇರಬೇಕೆಂದು ಹೇಳಿಕೊಟ್ಟೆ’ ಎಂದ ಬೇಡ ಅಂದಿನಿಂದ ಮಹಾ ಸಂತನಾದ.